ಹನ್ನೆರಡನೇ ಶತಮಾನದ ಸಾಮಾಜಿಕ-ರಾಜಕೀಯ ಕ್ರಾಂತಿಯ ಮುಂಚೂಣಿಯಲ್ಲಿದ್ದ ವೀರಶೈವ ಧರ್ಮದ ನೇತಾರ ಅಣ್ಣ ಬಸವಣ್ಣನನ್ನು ಬಸವ ಬಸವಣ್ಣ ಬಸವೇಶ್ವರ ಹಾಗೂ ವಿಶ್ವಗುರು ಬಸವೇಶ್ವರ ಜಗಜ್ಯೋತಿ ಬಸವೇಶ್ವರ ಎಂದು ಮುಂತಾಗಿ ನಮ್ಮ ಜನರು ಗ್ರಹಿಸಿಕೊಂಡಿದ್ದಾರೆ. ಈ ಸಂಭೋದನಾ ರೂಪಗಳು ಬಸವಣ್ಣನನ್ನು ವಿಭಿನ್ನವಾಗಿ ಪರಿಭಾವಿಸಿಕೊಂಡಿರುವುದರ ರೂಪಕಗಳಾಗಿವೆ. ಭಾಷಿಕ ರಚನೆಯ ನೆಲೆಗಳು ಸಾಮಾಜಿಕ ಹಾಗೂ ಲೋಕದೃಷ್ಟಿಯ ನೆಲೆಗಳಾಗಿರುತ್ತವೆ. ಭಾಷೆಯು ಸಂಸ್ಕೃತಿಯೊಂದಿಗೆ ತನ್ನ ನಂಟನ್ನಿಟ್ಟುಕೊಂಡಿರುತ್ತೆ. ಈ ಭಾಷಿಕ-ಸಾಂಸ್ಕೃತಿಕ ನೆಲೆಗಳ ನಡುವಿನ ನಂಟು ಸಾಮಾಜಿಕ-ಧಾರ್ಮಿಕ ಭಿನ್ನತೆಯ ನೆಲೆಗಳನ್ನು ಆಶ್ರಯಿಸಿಕೊಂಡಿರುತ್ತೆ. ಈ ನೆಲೆಗಳು ಸಾಂಸ್ಕೃತಿಕ ಅಸ್ಮಿತಿಯನ್ನೂ ಪ್ರತಿನಿಧಿಸುವ ಮಹತ್ತರದ ಸೂಚಕಗಳಾಗಿ ರೂಪಗೊಳ್ಳುತ್ತವೆ. ಇಂತಹದೇ ಪ್ರಕ್ರಿಯೆಯಿಂದ ಯಾವುದೇ ಚರಿತ್ರೆಯು ರೂಪಿಸಿಕೊಂಡಿದ್ದ ಹಾಗೂ ಅದನ್ನೆ ಅತೀ ಮುಖ್ಯ ತಿಳುವಳಿಕೆ ಎಂದು ನಂಬಿಕೊಂಡು ಸಾಂಸ್ಕೃತಿಕ ಬಿಕ್ಕಟ್ಟುಗಳಿಗೆ ಕಾರಣವಾಗಿದ್ದ ಸಾಕಷ್ಟು ನಿದರ್ಶನಗಳು ನಮ್ಮ ಇತಿಹಾಸದುದ್ದಕ್ಕೂ ಸಿಗುತ್ತವೆ. ವೈದಿಕ ಧರ್ಮವೂ ಹೀಗೆ ತನ್ನ ಧಾರ್ಮಿಕ ಪ್ರಾಬಲ್ಯವನ್ನು ಸ್ಥಾಪಿಸಿಕೊಂಡಿತ್ತು. ಇಂತಹ ವೈದಿಕ ಧರ್ಮದ ಸಾಮಾಜಿಕ-ಸಾಂಸ್ಕೃತಿಕ ತಿಳುವಳಿಕೆಯನ್ನು ಬುಡಮೇಲು ಮಾಡಿದ ಈ ಬಸವಣ್ಣ ಸಹಜವಾಗಿಯೇ ವಿಭಿನ್ನವಾಗಿ ಪರಿಚಿತನಾಗಿದ್ದಾರೆ. ಈ ಭಿನ್ನತೆಯ ನೆಲೆಗಳ ಆಂತರ್ಯದಲ್ಲಿರುವ ಉದ್ಧೇಶಗಳು ಮತ್ತು ಇವುಗಳು ಸೃಷ್ಟಿಸುವ ಅಪಾಯದ ಬಗ್ಗೆ ಯೋಚಿಸಬೇಕಾಗಿದೆ. ಇಂತಹ ಅಪಾಯಗಳನ್ನು ಸಾಂಸ್ಕೃತಿಕ ಧಾರ್ಮಿಕ ರೂಪಕಗಳನ್ನಾಗಿ ಗ್ರಹಿಸಿಕೊಂಡಿರುವ ಸಾಧ್ಯತೆಗಳಿವೆ. ಈ ರೂಪಕಗಳ ಬಳಕೆಯ ಹಿಂದಿನ ತಾತ್ವಿಕ ಮತ್ತು ಸಾಂಸ್ಕೃತಿಕ ಹೆಚ್ಚುಗಾರಿಕೆ ಏನು ಅನ್ನುವುದನ್ನು ಅರ್ಥೈಸಿಕೊಳ್ಳುವ ಪ್ರಯತ್ನ ಈ ಟಿಪ್ಪಣಿಯ ಉದ್ಧೇಶ.
ಸನಾತನ ಹಿಂದು ಧರ್ಮದ ಪರ್ಯಾಯ ಧಾರ್ಮಿಕ-ಸಾಮಾಜಿಕ ಚಳುವಳಿಯಾಗಿ, ಶೂದ್ರ ಮತ್ತು ದಲಿತತ್ವದ ಆಲೋಚನ ಕ್ರಮವಾಗಿ ಹಾಗೂ ಸಮಾಜದಂಚಿನಲ್ಲಿರುವ ಪ್ರತಿಯೊಬ್ಬರ ಅಸ್ತಿತ್ವವನ್ನು ಮೌಲ್ಯೀಕರಿಸುವ ಪ್ರಾಯೋಗಿಕ ಪಾಠಶಾಲೆಯಾಗಿ ವೀರಶೈವ ಧರ್ಮವು ಅವತರಿಸಿದ್ದರೂ, ಇಂದು ಈ ಚಳುವಳಿಯು ಆ ಸನಾತನ ಹಿಂದು ಧರ್ಮದ ಸಾತತ್ಯದ ಚಹರೆಗಳನ್ನು ಎತ್ತಿ ಹಿಡಿಯುವ ಒಂದು ಧಾರ್ಮಿಕ ಚಳುವಳಿಯಾಗಿಯೇ ಅರ್ಥೈಸಿಕೊಂಡಿರುವುದು ಚಾರಿತ್ರಿಕ-ಸಾಂಸ್ಕೃತಿಕ ವಿಪರ್ಯಾಸವೇ ಸರಿ. ಈ ರೂಪಾಂತರಕ್ಕೆ ಕಾರಣಗಳು ಇಲ್ಲವೇ ಇಲ್ಲ ಅನ್ನುವದನ್ನು ತಳ್ಳಿಹಾಕುವಂತಿಲ್ಲವಾದರೂ ಆ ಯಾವ ಕಾರಣವು ಇದರ ಪುನರ್ ಅಸ್ತಿತ್ವದ ಚಹರೆಗಳನ್ನು ಕಟ್ಟಿಕೊಡುವ ಇರಾದೆ ಉಳ್ಳದ್ದಲ್ಲ. ಈ ಸ್ಥಿತ್ಯಂತರದ ಹಿಂದಿನ ಪ್ರೇರಣೆ ಅಥವಾ ಕಾರಣಗಳನ್ನು ಮರುಶೋಧಿಸುವ ಅಗತ್ಯ ಇಲ್ಲ. ಆ ಎಲ್ಲ ಕಾರಣಗಳು ಸಾಮಾಜಿಕ-ರಾಜಕೀಯ ಪ್ರೇರಿತ ಹುನ್ನಾರಗಳು ಅನ್ನುವುದು ಕಣ್ಣಿಗೆ ರಾಚುವ ಸತ್ಯ. ಈ ಸತ್ಯ ಕೇವಲ ವೀರಶೈವ ಚಳುವಳಿಗೆ ಮಾತ್ರ ಅನ್ವಯಿಸಿದ್ದಲ್ಲ. ಇಂತಹ ರೂಪಾಂತರಗಳು ಇತಿಹಾಸದುದ್ದಕ್ಕೂ ಸಿಗುತ್ತವೆ. ಈ ಕಾರಣದಿಂದಲೇ ಪರ್ಯಾಯ ಸಾಮಾಜಿಕ-ಧಾರ್ಮಿಕ ಚಳುವಳಿಗಳ ಅಗತ್ಯ ಮತ್ತೆ ಮತ್ತೆ ಹುಟ್ಟುಕೊಳ್ಳುತ್ತದೆ. ಬಸವಣ್ಣನಿಗೆ ಸ್ಥಾಪಿತ ಜಾತಿ ಪದ್ಧತಿಯಿಂದ ಮುಕ್ತಿ ಪಡೆಯುವ ಮಾರ್ಗವಾಗಿಯೂ ಈ ವೀರಶೈವ ಆಂದೋಲನ ಹುಟ್ಟಿಕೊಂಡದ್ದು ಗಮನಾರ್ಹ. ಶೂದ್ರ ಮತ್ತು ದಲಿತರನ್ನು ಧಾರ್ಮಿಕ-ಸಾಮಾಜಿಕ ಮುನ್ನೆಲೆಗೆ ತರುವ ಪ್ರಯತ್ನದ ತಾತ್ವಿಕ ಹಿನ್ನಲೆ ಇವತ್ತು ಸಾಂಸ್ಕೃತಿಕ ವಿಘಟನೆಯನ್ನು ಸೃಷ್ಟಿಸಿದೆ. ವಿರಶೈವ ಧರ್ಮವು ಸಾಂಘಿಕ ಭದ್ರತೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಗಳನ್ನು ಮೈಗೂಡಿಸಿಕೊಂಡು ಸಮುದಾಯ ಪ್ರಜ್ಞೆಗೆ ಎಡೆಮಾಡಿಕೊಟ್ಟಿತ್ತು. ರಾಜಕೀಯ ಲಾಭ ಹಾಗೂ ಕೋಮು ಕಟುವಾದಿಗಳ ಏಕಪಕ್ಷೀಯ ನಿರ್ಧಾರಗಳು ಧರ್ಮನಿರಪೇಕ್ಷವಾದ ವೀರಶೈವ ಆಂದೋಲನವು ಇವತ್ತು ಕೋಮುವಾದಿಗಳೊಂದಿಗೆ ಕೈ ಜೋಡಿಸಿದೆ. ವ್ಯತಿರಿಕ್ತವಾಗಿ ಧಾರ್ಮಿಕ ಕ್ರಾಂತಿಯೆಂದರೆ ಕೋಮುವಾದೀಕರಣ ಎನ್ನುವ ತೀರ್ಮಾನದಲ್ಲಿದೆ. ಈ ಆಂದೋಲನವು ರೂಪಿಸಿಕೊಂಡಿದ್ದ ಕೆಲವು ಧಾರ್ಮಿಕ ಸಂಕೇತಗಳಾದ ಆತ್ಮಲಿಂಗ, ಜಂಗಮ, ಪ್ರಸಾದ ಮುಂತಾದವುಗಳು ಜಾತಿಯ ಲಾಂಛನಗಳಾಗಿ ಮಾರ್ಪಟ್ಟಿವೆ. ಸಂಕೇತ ಮತ್ತು ಲಾಂಚನಗಳ ನಡುವಿನ ಧಾರ್ಮಿಕ-ಸಾಂಸ್ಕೃತಿಕ ಸೂಕ್ಷ್ಮಗಳು ಗೋಚರಿಸದೆ ಹೋಗಿದ್ದು ದುರಂತವೇ ಸರಿ. ವಿಪರ್ಯಾಸ ನೋಡಿ ಶ್ರೇಣೀಕೃತ ನೂರಾರು ಒಳಪಂಗಡಗಳು ಈ ವೀರಶೈವ ಧರ್ಮದಲ್ಲಿ ಮರುಹುಟ್ಟು ಪಡದಿವೆ. ವರ್ಣಾಶ್ರಮದ ಅನಿಷ್ಠ-ನಿಶಿದ್ಧ ಆಚರಣೆಗಳನ್ನು ನಿರ್ನಾಮ ಮಾಡಿಬೇಕಿದ್ದ ಈ ಚಳುವಳಿಯೂ ಅಂತಹ ಒಂದು ಧರ್ಮದ ಮುಂದಾಳುತನದಲ್ಲಿ ತನ್ನ ಅಸ್ತಿತ್ವ ಮತ್ತು ಅಸ್ಮಿತಿಯನ್ನು ಗುರುತಿಸಿಕೊಳ್ಳಲು ಹೆಣಗುತ್ತಿರುವ ಈ ಧರ್ಮದ ತಾತ್ವಿಕತೆಯನ್ನು ಮರುಪ್ರಶ್ನಿಸುವ ಜರೂರಿದೆ. ಹಾಗೂ ಈ ಆಂದೋಲನದ ಮುಂದಾಳುತನ ವಹಿಸಿದ್ದ ಬಸವ, ಬಸವಣ್ಣ ಮತ್ತು ಬಸವೇಶ್ವರ ಎಂಬೀತ್ಯಾದಿ ಹೆಸರುಗಳಿಂದ ಗುರುತಿಸಿಕೊಂಡ ಇವರ ತತ್ವ-ಸಿದ್ಧಾಂತದ ಪರಿ ಏನು ಅನ್ನುವುದನ್ನು ಚರ್ಚಿಸಬೇಕಿದೆ.
ಬಸವಣ್ಣ ವೇದ ಮತ್ತು ವೈದಿಕ ಧರ್ಮದ ಆಚರಣೆಗಳನ್ನು ದಿಕ್ಕರಿಸಿ ವೀರಶೈವ ಎನ್ನುವ ಜೀವಪರ ಧರ್ಮದ ಹುಟ್ಟಿಗೆ ಕಾರಣ ಕರ್ತನಾದರು. ಈ ಆಂದೋಲನವು ತಮ್ಮ ವೃತ್ತಿ ಮತ್ತು ಅಸ್ತಿತ್ವದ ವೈವಿಧ್ಯತೆಯ ಚಹರೆಗಳನ್ನು ಹಾಗೇ ಉಳಿಸಿಕೊಂಡು ಅವುಗಳನ್ನು ನಿರಾಕಾರಿ ಮತ್ತು ಅಮೂರ್ತಸ್ವರೂಪದ ಸಂಕೇತವಾದ ಆತ್ಮಲಿಂಗವನ್ನು ಸೃಷ್ಟಿಸುವುದರ ಮುಖೇನ ಸಮಾನತೆಯ ಅಂತರ್‌ಬೆಸುಗೆಯನ್ನು ಹಾಕಿದರು. ಲಿಂಗವು ಸಾಮಾಜಿಕ-ಧಾರ್ಮಿಕ ಅಸಮತೋಲನವನ್ನು ನಾಶಮಾಡಿ ಸಾಂಸ್ಕೃತಿಕ ಐಕ್ಯತೆಯನ್ನು ಸಾಧಿಸುವುದರ ರೂಪಕವಾಗಿ ಪ್ರತಿನಿಧಿಸುತ್ತೆ. ಇಂತಹ ಸಂಬಂಧಗಳು ಗಟ್ಟಿಗೊಳ್ಳಲು ಅಂತರ್‌ಜಾತೀಯ ಮದುವೆಗಳನ್ನು ಉತ್ತೇಜಿಸಿದರು. ಸಾಮಾಜಿಕ ಸಮಾನತೆಯ ನೆಲೆಗಳನ್ನು ಅಂತರಂಗ ಬಹಿರಂಗದ ಶುದ್ಧತೆಯ ಆಯಾಮಗಳಲ್ಲಿ ಕಂಡುಕೊಂಡಿರುವುದು ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಇಂತಹ ಸಾಂಸ್ಕೃತಿಕ ಆಯಾಮಗಳಿಗೆ ಮಹತ್ವ ನೀಡಿರುವುದು ಗಮನಾರ್ಹ. ಸಾಮಾಜಿಕ-ಧಾರ್ಮಿಕ ಪರಿವರ್ತನೆ ಮತ್ತು ಸುಧಾಹರಣೆಗಳ ಸ್ಪಷ್ಟ ನೆಲೆಗಳನ್ನು ಮಾನವತವಾದಿ ಲಕ್ಷಣಗಳಾಗಿ ನಮ್ಮ ಚರಿತ್ರೆಯಲ್ಲಿ ಬಿಂಬಿತವಾಗಿವೆ. ಮನುಷ್ಯನ ದೇಹವೇ ದೇವಾಲಯ ಎನ್ನುವುದು ಪ್ರತಿ ಮನುಷ್ಯನ ಆತ್ಮವಿಶ್ವಾಸವನ್ನು ಮತ್ತು ಆತ್ಮಗೌರವವನ್ನು ಬಲಪಡಿಸುತ್ತದೆ. ಈ ದೈಹಿಕ ರಚನೆಯನ್ನು ದೇವಾಲಯವೆಂದು ಹೇಳಿರುವುದು ಸಮಾಜದಂಚಿನಲ್ಲಿದ್ದ ವಂಚಿತ ಸಮುದಾಯದ ಸುಪ್ತ ಮನಸ್ಸಿನಲ್ಲಿ ಬೇರೂರಿದ್ದ ಅಸಮಾನತೆಯನ್ನು ನಾಶಗೊಳಿಸಿದ್ದರ ರೂಪಕವಾಗಿದೆ. ಮನುಸ್ಸು ಮತ್ತು ಕ್ರಿಯೆಯ ನಡುವಿನ ಕಂದರವನ್ನು ಸೃಷ್ಟಿಸಿದ ಐತಿಹ್ಯಗಳನ್ನು ಒಡೆದಿದ್ದಾರೆ. ವೇದ-ಪುರಾಣಗಳನ್ನು ದಿಕ್ಕರಿಸಿ ಮನುಕುಲದ ಉದ್ಧಾರಕ್ಕೆ ಹೊಸ ಭಾಷ್ಯವನ್ನು ಬರೆದಿರುವ ಈ ವ್ಯಕ್ತಿ ನಮ್ಮ ಮಾನಸದಲ್ಲಿ ಅಣ್ಣ ಬಸವಣ್ಣನಾಗಿರುವರು. ಇವರು ಯಾವತ್ತು ದೇವರಾಗಿ ಅಥವಾ ದೈವಿಸಂಭೂತನಾಗಿ ದಕ್ಕಿದವರಲ್ಲ. ಕೇವಲ ನಮ್ಮ ಸಾಮಾಜಿಕ-ರಾಜಕೀಯ-ಧಾರ್ಮಿಕ ಕೊಳಕು ತೊಳೆಯುವ ಮಡಿವಾಳ ಮಾಚಯ್ಯನ ರೂಪಕ. ಬಸವಣ್ಣ ಸಾಮಾಜಿಕ-ಧಾರ್ಮಿಕ ಅಧಿಕಾರದ ವಿಕೇಂದ್ರಿಕರಣ ಹಾಗೂ ಸಾಮಾಜಿಕ ಮೇಲ್ಚಲನೆ ದಕ್ಕಿಸಿಕೊಟ್ಟ ಒಬ್ಬ ಹೋರಾಟಗಾರ ಮಾತ್ರ. ಮನುಷ್ಯನು ತನ್ನ ವ್ಯಕ್ತಿತ್ವದ ಗಡಿಗಳ ಮಿತಿಯನ್ನು ದಾಟುವ ಹಂಬಲದ ಸೂಚಕ ಈ ಬಸವಣ್ಣ ಆದ್ದರಿಂದ, ವಚನ ಚಳುವಳಿಯ ಒಟ್ಟು ಆಶಯ ಮಾನವನ ಅಸ್ತಿತ್ವದ ಶೋಧನೆಯಾಗಿ ಪ್ರತಿನಿಧಿಕರಣಗೊಂಡಿದೆ. ಈ ಪ್ರತಿನಿಧಿಕರಣವು ಅಧಿಕಾರದ ನೆಲೆಯಿಂದ ಸಾಮಾನ್ಯ ಮನುಷ್ಯನ ನೆಲೆಗೆ ವಿಸ್ತಾರಗೊಂಡಿದೆ. ಈ ಪ್ರಕ್ರಿಯೆಯ ಹಿಂದಿನ ಪ್ರೇರಣೆ ಬಸವಣ್ಣ ಅನ್ನವುದು ಮುಖ್ಯ ಹಾಗಾಗಿ ಇವರೊಬ್ಬ ಸಾಮಾಜಿಕ ಕಾಳಜಿಯ ಆಕ್ಟ್ವಿಸ್ಟ್ ಆಗಿ ದಕ್ಕಿರುತ್ತಾರೆ. ಕಾಲ ದೇಶಗಳ ಹಂಗನ್ನು ಮೀರಿ ಒಂದು ಸಮುದಾಯದ ಹಿತಾಸಕ್ತಿಯನ್ನು ಕಾಪಾಡಿದ/ಕಾಪಾಡುವ ಆಲೋಚನಕ್ರಮವನ್ನು ಹುಟ್ಟು ಹಾಕಿದ ಜನಪರ ಚಿಂತಕ ಬಸವ.
‘ನುಡಿದರೆ ಮುತ್ತಿನ ಹಾರದಂತಿರಬೇಕು......’ ಎನ್ನುವಂತಹ ವಚನಗಳಲ್ಲಿ ನಿರ್ದೇಶನ ಅಥವಾ ಒತ್ತಾಯದ ಧ್ವನಿಯನ್ನು ಗುರುತಿಸಲಕ್ಕೆ ಸಾಧ್ಯವಿಲ್ಲ. ಇಲ್ಲಿ ಸಾಮಾಜಿಕ ಸಮಾನತೆಯ ಸಂಕೇತವಾಗಿ ಭಾಷೆಯನ್ನು ಬಳಸಬೇಕು ಎನ್ನುವ ಹಂಬಲವಿದೆ. ನಮ್ಮ ನುಡಿ ಯಾವುದೇ ಸಾಮಾಜಿಕ-ಧಾರ್ಮಿಕ ಅಸಮಾನತೆಯ ರೂಪಕವಾಗಿ ಬಳಕೆಯಾಗಕೂಡದು ಎನ್ನುವ ಸಾಂಸ್ಕೃತಿಕ ವಿವೇಕ ಅಲ್ಲಿದೆ. ‘ದಯೆ ಬೇಕು ಸಕಲ ಪ್ರಾಣಿಗಳಲಿ’ ಅನ್ನುವ ಹಂಬಲವು ಕೂಡ ಜೀವ ಕಾರುಣ್ಯದ ತುಡಿತವಾಗಿದೆ. ದಯವೇ ಧರ್ಮದ ಮೂಲ ಅನ್ನುವ ಮಾತು ಜೀವಪರ ಧರ್ಮವನ್ನು ಅನುಷ್ಠಾನಗೊಳಿಸಿದ ಕ್ರಮ. ಅದಕ್ಕಾಗಿಯೇ ಬಸವಣ್ಣನ ‘ಹರಕೆಯ ಕುರಿ ಬಲಿಯ ಕುರಿತು ಮಾತಾಡುವಾಗ ಕೊಲ್ಲಿದವನು ಉಳಿವನೇ?’ ಎಂಬ ಮರು ಪ್ರಶ್ನೆ ಎತ್ತುತ್ತಾರೆ. ಸಮಾಜದಂಚಿನಲ್ಲಿರುವ ಜನರ ಆಶೋತ್ತರಗಳನ್ನು ಕಾಪಾಡುವ ಹಾಗೂ ಅವರ ಬದುಕಿಗೂ ಒಂದು ಸಾಮಾಜಿಕ-ರಾಜಕೀಯ ಅಸ್ತಿತ್ವದ ನೆಲೆಗಳನ್ನು ಕಟ್ಟಿಕೊಡುವ, ಸಾಮಾಜಿಕ ತಾರತಮ್ಯವನ್ನು ನಿರ್ನಾಮ ಮಾಡುವ ಹಾಗೂ ಅಂತವರನ್ನು ಸಾಮಾಜಿಕ ಮುನ್ನೆಲೆಗೆ ತರುವ ಪ್ರೀತಿಯ ಬಸವಣ್ಣನಾಗಿ ದಕ್ಕಿದ್ದು ಅಪಾರ ಜನಸಮೂಹಕ್ಕೆ. ಬಸವಣ್ಣರನ್ನು ಶಿವನ ವಾಹನ ನಂದಿಯ ಮರು ಅವತಾರವೆಂದು ನಂಬಿರುವ ಸಾಧ್ಯತೆಗಳೂ ಇವೆ. ನಮ್ಮ ರೈತರು ಬಸವ ಜಯಂತಿಯನ್ನು ಬಸವೇಶ್ವರನ ಪುಣ್ಯ ಜಯಂತಿಯಾಗಿ [ಧಾರ್ಮಿಕ ಆಚರಣೆ] ಆಚರಿಸುವ ಬದಲಾಗಿ, ತಮ್ಮ ಏಳ್ಗೆಗಾಗಿ ನಿರಂತರ ಶ್ರಮಿಸುವ ಶ್ರಮಿಕ ಮೂಕ ಪ್ರಾಣಿಗಳಾದ ಎತ್ತುಗಳ ಹಬ್ಬವಾಗಿ ಆಚರಿಸುವುದು ಗಮನಾರ್ಹ. ರೈತರು ಇಡೀ ದಿವಸ ಎತ್ತುಗಳ ಮೈತೊಳೆದು, ಅವುಗಳ ಕೊಂಬುಗಳನ್ನು ಶೃಂಗರಿಸಿ, ಪೂಜೆ-ನೈವೇಧ್ಯ ಕಾರ್ಯಗಳನ್ನು ನೆರವೆರಿಸಿ, ಆ ದಿನ ಸಂಜೆ ಊರಸುತ್ತ ಮೆರವಣಿಗೆ ಹೋಗಿ ಸಂಬ್ರಮಿಸುವ ಹಬ್ಬವಾಗಿದೆ. ಈ ಹಬ್ಬವನ್ನು ಆಚರಿಸುವ ಮುಖೇನ ರೈತ ತನಗಾಗಿ ಬದುಕುವ ಮತ್ತು ಬದುಕು ನೀಡುವ ಒಂದು ಸಾರ್ಥಕ ಜೀವದ ಋಣಭಾರವನ್ನು ತೀರಿಸುವ ಧೈನ್ಯತೆಯ ಸೂಚಕವಾಗಿ ಬಸವನನ್ನು ಸೃಷ್ಟಿಸಿಕೊಂಡು ಈ ಹಬ್ಬವನ್ನು ಆಚರಿಸುವುದು ವಿಶೇಷ.
ಬಸವೇಶ್ವರನನ್ನು ಬಂಡವಾಳವಾಗಿ ಬಳಸಿಕೊಳ್ಳುತ್ತಿರುವ ಜಾತಿವಾದಿಗಳು, ರಾಜಕಾರಣಿಗಳು ಆ ಜಾತಿಪರ ಕಂಕಣಕಟ್ಟಿ ಹೋರಾಡುತ್ತಿದ್ದೇವೆ ಎನ್ನುವ ಡೃಢಸಂಕಲ್ಪದ ವೇಷದಲ್ಲಿ ನಟಿಸುತ್ತಿರುವ ಕೋಮುಕಟುವಾದಿಗಳು ಬಸವೇಶ್ವರನನ್ನು ಸೃಷ್ಟಿಸಿದರು. ಸಾಮಾನ್ಯ ಜನ ಬಸವ ಜಯಂತಿಯಂತಹ ದಿನಗಳಂದು ಬಸವ ಅಥವಾ ಬಸವಣ್ಣನ ಆದರ್ಶಗಳನ್ನು ಪುನನೆನಪಿಸಿಕೊಂಡು ತಮ್ಮ ಆದರ್ಶದ[?] ಬದುಕನ್ನು ಕಟ್ಟಿಕೊಳ್ಳುವ ಇರಾಧೆಯ ಆಚರಣೆಯಾಗಿ ಆಚರಿಸಿದ್ದೂ ಇತಿಹಾಸದಲ್ಲಿಯೇ ಇಲ್ಲ ಎನ್ನಬಹುದು. ಜಾತಿವಾದಿಗಳು ಜಾತ್ಯಾತೀತ ಭಾಷಣ ಮಾಡುತ್ತ ಜಾತೀಯತೆಯ ವಿಷಬೀಜವನ್ನು ಬಿತ್ತರಿಸುವ ಸಮಾಜಘಾತುಕ ಕಾರ್ಯವನ್ನು ನಿರಂತರವಾಗಿ ಜೀವಂತವಾಗಿಸುವ ಪಾಪದ ಕೆಲಸವನ್ನು ಬಸವನ ಪುಣ್ಯಜಯಂತಿಯ ಹೆಸರಿನಲ್ಲಿ ನಡಸುತ್ತ ಬಂದಿದ್ದಾರೆ. ಬಹುಶ ಇಂತಹದೇ ಭಾಷಿಕ ರಚನೆಯ ನೆಲೆಗಳ ಸಂಕಥನವನ್ನು ಭಾಷೆಯೂ ಘಾತಕ ವೆಂದು ಅಲ್ಲಮನು ವ್ಯಕ್ತಪಡಿಸಿರಬಹುದು. ಈ ಭಾಷಿಕ ರಚನೆಗಳು ಇಂದಿನ ಸಾಮಾಜಿಕ-ಸಾಂಸ್ಕೃತಿಕ ರಚನೆಗಳೂ ಆಗಿರುತ್ತವೆ ಎನ್ನುವುದು ಸ್ಪಷ್ಟ. ಈ ಸಾಮಾಜಿಕ ವೈವಿಧ್ಯತೆಯನ್ನು ಏಕೀರೂಪಿಸುವ ಮಾದರಿಗಳು ಸಾಂಸ್ಕೃತಿಕ ವೈವಿಧ್ಯತೆಗೆ ಅಪಾಯವನ್ನು ಒಡ್ಡದೆ ಇರಲಾರವು. ಇಂತಹ ಮಾದರಿಗಳು ಸಾಮಾಜಿಕ-ಧಾರ್ಮಿಕ ಐಕ್ಯತೆ ಮತ್ತು ಏಕತೆಯ ನಡುವಿನ ವ್ಯತ್ಯಾಸಗಳನ್ನು ಗುರುತಿಸಲು ಸಾಧ್ಯವಿಲ್ಲ. ಈ ಏಕರೂಪಾತ್ಮಕ ಮಾದರಿಗಳು ಸೃಷ್ಟಿಸುವ ಅಪಾಯಗಳ ಬಗ್ಗೆ ನಮ್ಮ ಮಠಾಧೀಶರು ಮತ್ತು ರಾಜಕಾರಣಿಗಳು ಯೋಚಿಸುವ ಸಂದರ್ಭಗಳು ತೀರಾನೇ ಕಮ್ಮಿ. ಕಾರಣ ಜಾತಿಪದ್ಧತಿಯು ಸಾಮ್ರಾಜ್ಯಶಾಹಿ ಸ್ವರೂಪದ್ದು ಮತ್ತು ಅಧಿಕಾರ ಸಂಬಂಧದ ವಿಭಿನ್ನ ಆಯಾಮಗಳನ್ನು ಒಳಗೊಂಡಿರುವುದು. ಜಾತ್ಯಾತೀತ ಶಕ್ತಿಗಳು ಕೂಡ ಒಳಗಣ ಜಾತೀಯತೆಯನ್ನು ಮೀರಲಾರದೆ ಹುಸಿ ಆದರ್ಶದ ಹೊರಗಣ ಜಾತ್ಯಾತೀತತೆಯನ್ನು ಮೆರೆಯುತ್ತವೆ. ಜಾತೀಯತೆ ಮತ್ತು ಧಾರ್ಮಿಕವಾದವು ಯಜಮಾನ್ಯ ಸಂಸ್ಕೃತಿಯ ಪ್ರತೀಕ. ಈ ಸಂಕಥನಗಳು ಹಠದಿಂದ ನಿರಂತರ ಪ್ರತ್ಯೇಕತೆಯ ವಾದಗಳನ್ನು ಮಂಡಿಸುತ್ತವೆ. ಇದು ಮಾತ್ರವಲ್ಲದೆ ವೈವಿಧ್ಯತೆಯಲ್ಲಿರುವ ಏಕತೆಯನ್ನು ನಾಶಮಾಡಿ ಕೇವಲ ಏಕೀಕರಿಸುವ ಹುನ್ನಾರಗಳಿಗೂ ಕಮ್ಮಿ ಇಲ್ಲ. ಇಂತಹ ಹುನ್ನಾರಗಳು ಸಾಂಸ್ಕೃತಿಕ ಒಗ್ಗಟ್ಟನ್ನು ಛಿದ್ರಗೊಳಿಸುವ ಕ್ರಮಗಳನ್ನು ಹುಟ್ಟು ಹಾಕುತ್ತವೆ. ಈ ವಿನಾಶದ ಕಾರಣಕ್ಕಾಗಿ ಅಂತರ್ಜಾತಿ ಮದುವೆಗಳು ಸೂತಕ ಕಾರ್ಯದಂತೆ ಪರಿಗಣಿಸಲ್ಪಟ್ಟಿವೆ.
ಇಂತಹ ಸಾಕಷ್ಟು ವಿಪರ್ಯಾಸ, ವೈರುಧ್ಯಗಳ ನಡುವೆ ಬಸವೇಶ್ವರ ಬಸವನಾಗಿ ಅಥವಾ ಬಸವಣ್ಣನಾಗಿ ದಕ್ಕಿರುವ ನಿದರ್ಶನಗಳು ಬಹಳನೇ ಕಮ್ಮಿ. ಇಂತಹ ಸನ್ನಿವೇಶಗಳು ಕಾಣಸಿಗುವುದಾದರೆ ಸಮಾಜದಂಚಿನಲ್ಲಿರುವ ಸಾಮಾನ್ಯ ಜನರಲ್ಲಿ ಮತ್ತು ರೈತರಲ್ಲಿ ಕಾಣಬಹುದು. ಇಂದು ಬಸವ ತತ್ವಗಳು ಮುಂಚೂಣೆಗೆ ಬರುತ್ತಿರುವುದು ರಾಜಕೀಯ ದೃವಿಕರಣಕ್ಕಾಗಿ ಅಥವಾ ಲಾಭಕ್ಕಾಗಿ ಹಾಗೂ ಮಠಾದೀಶರ ಮತ್ತು ಕೋಮುವಾದಿಗಳ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲಕ್ಕೆ ಮಾತ್ರ. ಜಾತಿ ವ್ಯವಸ್ಥೆ ಕುರಿತು ಸಾಕಷ್ಟು ಪ್ರತಿಕ್ರಿಯೆಗಳು ಬಂದಿರುವುದನ್ನು ಚರಿತ್ರೆಯ ಉದ್ದಕ್ಕೂ ಕಾಣಬಹುದು. ಜಾತಿ ರಾಜಕಾರಣದ ಹಿಂದಿನ ಪ್ರೇರಣೆಗಳ ಶೋಧನೆಯ ಅಗತ್ಯ ಕಂಡುಕೊಳ್ಳುವ ಸಂಕಲ್ಪ ಯಾರೂ ಮಾಡಿದ ಹಾಗಿಲ್ಲ ಅಥವಾ ಅದರ ಅಗತ್ಯವೂ ಇರಲಿಕ್ಕಿಲ್ಲ. ಚರಿತ್ರೆಯು ತನ್ನ ಕಾಲದ ಸಾಮಾಜಿಕ-ಧಾರ್ಮಿಕ ಸ್ಥಿತಿಗಳನ್ನು ಪುನರ್‌ರೂಪಿಸಿಕೊಳ್ಳುವುದರ ಹಿಂದಿನ ಪ್ರೇರಣೆ ಕೇವಲ ರಾಜಕಾರಣವಿರಲಾರದು, ಆದರೆ ಅದು ಹೆಚ್ಚು ನಗಣ್ಯವಾಗುತ್ತಿರುವುದು ರಾಜಕಾರಣಕ್ಕೆ ಮಾತ್ರ. ಜಾತಿ/ಧರ್ಮಗಳು ಮನುಕುಲದ ಜೀವನಕ್ರಮದ ಚಲನೆಯೂ ಹೌದು ಮತ್ತು ವೈವಿಧ್ಯತೆಯ ಲಕ್ಷಣವೂ ಹೌದು ಆದರೆ ಈಗ ಜಾತಿ/ಧರ್ಮಗಳು ರಾಜಕಾರಣದ ಗಾಳಗಳಾಗಿ ಮಾತ್ರ ಉಳಿದುಕೊಂಡಿರುವುದು ಮನುಕುಲದ ಚಾರಿತ್ರಿಕ ಅವಮಾನವೇ ಸರಿ.
[ಚಿತ್ರಗಳು-ಸಂಗ್ರಹದಿಂದ]
No comments:
Post a Comment