Friday, April 23, 2010

DNS Bhat

ಡಿ.ಎನ್.ಶಂಕರ ಭಟ್ಟರೊಂದಿಗೆ ಒಂದು ಉದ್ದದ ಮಾತುಕತೆ
ಸಂಪಾದಕ
ಶನಿವಾರ, 3 ಏಪ್ರಿಲ್ 2010 (04:37 IST)


ಶಂಕರ ಭಟ್

ಭಾಷಾವಿಜ್ಞಾನಿ ಡಿ.ಎನ್. ಶಂಕರ ಭಟ್ಟರನ್ನು ಹೊಸ ತಲೆಮಾರಿನ ಲೇಖಕರಾದ ಮೇಟಿ ಮಲ್ಲಿಕಾರ್ಜುನ ಮತ್ತು ಸಿರಾಜ್ ಅಹಮದ್ ಮಾತಿಗೆಳೆದಾಗ......

ಮೇಟಿ: ನೀವು ಮೂಲತಃ ಸಂಸ್ಕೃತ ವಿದ್ವಾಂಸರಾಗಿದ್ದುಕೊಂಡು ಕನ್ನಡದ ಬಗ್ಗೆ, ಭಾಷಾಶಾಸ್ತ್ರದ ಬಗ್ಗೆ ಹೇಗೆ ಆಸಕ್ತಿಯನ್ನು ಬೆಳೆಸಿಕೊಂಡಿರಿ?

ಹೌದು, ನಾನು ಮೂಲತಃ ಸಂಸ್ಕೃತದಲ್ಲಿ ಎಂಎ ಮಾಡಿದ್ದು. ಎಂಎನಲ್ಲಿ ಫೈಲಾಲಜಿ ಅಂತ ಒಂದು ಸಬ್ಜೆಕ್ಟ್ ಇತ್ತು. ಆಗ ಅದರ ಬಗ್ಗೆ ಒಂದು ಸ್ವಲ್ಪ ಆಸಕ್ತಿ ಹುಟ್ಟಿತು. ಅದಕ್ಕಿಂತ ಮುಖ್ಯವಾಗಿ ಕಿಟ್ಟೆಲ್ ಡಿಕ್ಷನರಿಯನ್ನು ರಿವೈಜ್ ಮಾಡಿದ ನಮ್ಮ ಅಜ್ಜ ತಾಯಿಯ ಸೋದರ ಮಾವ ಎಂ.ಮರಿಯಪ್ಪಭಟ್ಟರು ಒಂದು ಸಾರಿ, ಡೆಕ್ಕನ್ ಕಾಲೇಜಿನವರು ಕೊಯಮತ್ತೂರಿನಲ್ಲಿ ನಡೆಸುವ ಒಂದು ಸಮ್ಮರ್ ಸ್ಕೂಲ್ ಇದೆ. ಅದಕ್ಕೆ ನೀನು ಹೋಗಬಹುದು ಎಂದು ಹೇಳಿದರು. ನಲವತ್ತು ದಿನ ನಡೆದ ಆ ಸಮ್ಮರ್ ಸ್ಕೂಲ್ ನಲ್ಲಿ ಒಳ್ಳೊಳ್ಳೆಯ ವಿದ್ವಾಂಸರಿದ್ದರು. ಗ್ಲೀಸನ್ ಇದ್ದರು ಪಿ.ಬಿ.ಪಂಡಿತ್, ಕೇಲ್ಕರ್, ಘಾಟ್ಕೆ ಇದ್ದರು ಅವರೆಲ್ಲರ ಕಾರಣದಿಂದ ನನಗೆ ಭಾಷಾಶಾಸ್ತ್ರದ ಬಗ್ಗೆ ಬಹಳ ಕುತೂಹಲ ಹುಟ್ಟಿತು. ನಂತರ ಘಾಟ್ಕೆ ಅವರ ಬಳಿ ತುಳು ಭಾಷೆಯ ಬಗ್ಗೆ ಪಿಎಚ್.ಡಿ ಮಾಡಲು ಪುಣೆಗೆ ಹೋದೆ.

ಮೇಟಿ: ಎಪ್ಪತ್ತರ ದಶಕದಲ್ಲಿ ನೀವು ಕನ್ನಡದಲ್ಲಿ ಬರೆಯುತ್ತಿದ್ದಿರಿ. ನಂತರ ತೊಂಬತ್ತರ ದಶಕದವರೆಗೆ ಕನ್ನಡದಲ್ಲಿ ಯಾಕೆ ಬರೆಯಲೇ ಇಲ್ಲ?

ಮತ್ತೆ ಕನ್ನಡದಲ್ಲಿ ಬರೆಯಲಿಕ್ಕೆ ಚಂದ್ರಶೇಖರ ಕಂಬಾರರು ಕಾರಣ. ಒಂದು ಸಾರಿ ಯಾವುದೋ ಸೆಮಿನಾರಿಗೆ ಅಂತ ಕನ್ನಡ ವಿಶ್ವವಿದ್ಯಾಲಯಕ್ಕೆ ಹೋಗಿದ್ದೆ. ಆಗ ಅವರು ನೀವು ಕನ್ನಡದಲ್ಲಿ ಯಾವುದಾದರೂ ಒಂದು ಪುಸ್ತಕ ಕೊಡಲೇಬೇಕು ಎಂದು ಒತ್ತಾಯ ಮಾಡಿದರು. ಅವರು ಒತ್ತಾಯ ಮಾಡದಿದ್ದರೆ ನಾನು ಕನ್ನಡದಲ್ಲಿ ಮತ್ತೆ ಬರೆಯುತ್ತಿರಲಿಲ್ಲವೇನೋ. ಆಗ `ಕನ್ನಡಭಾಷೆಯ ಕಲ್ಪಿತ ಚರಿತ್ರೆ' ಎಂಬ ಪುಸ್ತಕ ಬರೆದೆ. ಅದರ ನಂತರ `ಕನ್ನಡ ಶಬ್ದ ರಚನೆ' ಎಂಬ ಪುಸ್ತಕ ಬರೆದೆ. ಎಲ್ಲ ರೆಡಿಯಾದ ಮೇಲೆ ಅಲ್ಲಿನ ಕುಲಪತಿಗಳು ಬದಲಾದರು ಅಂತ ಅದು ಅಲ್ಲಿಗೇ ನಿಂತುಹೋಯಿತು.

ಸಿರಾಜ್: ನೀವು ಎಪ್ಪತ್ತರ ದಶಕಲ್ಲಿ ಬರೆದಾಗ ನಿಮ್ಮ ಬರಹಗಳಿಗೆ ಎಂಥ ಪ್ರತಿಕ್ರಿಯೆ ಸಿಕ್ಕಿತು?

ಇಲ್ಲ ಯಾರೂ ಅದರ ಬಗ್ಗೆ ಗಮನ ವಹಿಸಲಿಲ್ಲ. ನನ್ನ ಮೊದಲ ಪುಸ್ತಕ ಬಂದಾಗ ಚಿದಾನಂದ ಮೂರ್ತಿಯಂಥ ವಿದ್ವಾಂಸರು ನಿಮ್ಮ ಪುಸ್ತಕವನ್ನು ಲೈಬ್ರರಿಯ ರ್ಯಾಕಿನಲ್ಲಿ ನೋಡಿದೆ ಅಂದರು. ಅದರೆ ಅದೇ ಇಂಗ್ಲಿಷ್ ನಲ್ಲಿ ಬರೆದ ಪುಸ್ತಕಗಳು ಆಮ್ ಸ್ಟರ್ ಡ್ಯಾಮ್, ಎಡಿನ್ ಬರಾ, ಜರ್ಮನಿ, ಆಕ್ಸ್ ಫರ್ಡ್ ಮುಂತಾದ ಕಡೆಗಳಲ್ಲಿ ಚರ್ಚೆಗೆ ಒಳಗಾಗಿವೆ. ಅಲ್ಲೆಲ್ಲ ನಾನು ವಿಸ್ತೃತವಾದ ಸಂಶೋಧನೆ, ಅಧ್ಯಾಪನದಲ್ಲಿ ತೊಡಗಿಕೊಂಡಿದ್ದೇನೆ.

ಸಿರಾಜ್: ನೀವು ಇಷ್ಟು ವರ್ಷ ಮಾಡಿರುವ ಕೆಲಸವನ್ನು ನೋಡಿದರೆ ಲಿಖಿತ ಭಾಷೆಗೂ ಮತ್ತು ಆಡುನುಡಿಗೂ ನಡುವೆ ಇರುವ ತಾರತಮ್ಯವನ್ನು ಅಳಿಸಿ ಹಾಕಿ ಅವೆರಡನ್ನೂ ಬ್ರಿಡ್ಜ್ ಮಾಡುವ ಕೆಲಸ ಮಾಡುತ್ತಿದ್ದೀರ ಅನ್ನಿಸುತ್ತೆ. ಇದರ ಬಗ್ಗೆ ಹೇಳಿ.

ನಾನು ಅವೆರಡರ ನಡುವಿನ ಅಂತರವನ್ನು ಅಳಿಸುವ ಪ್ರಯತ್ನವೇನು ಮಾಡ್ತಾಯಿಲ್ಲ. ನಾನು ಮಾಡ್ತಾಯಿರುವುದೇನಂದರೆ ಇಂದು ಎಲ್ಲರ ಕನ್ನಡ ಎಲ್ಲರದಾಗಿಲ್ಲ. ಉದಾಹರಣೆಗೆ ಪ್ರಜಾವಾಣಿ, ಉದಯವಾಣಿ, ಸಂಯುಕ್ತ ಕರ್ನಾಟಕ ಮುಂತಾದ ದಿನಪತ್ರಿಕೆಗಳು ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ಪ್ರಕಟವಾದರೂ ಇವುಗಳ ಭಾಷೆ ಮಾತ್ರ ಒಂದೇ ಆಗಿರುತ್ತದೆ. ಇದನ್ನೇ ಇಂಗ್ಲಿಷ್ ನಲ್ಲಿ ಸ್ಟ್ಯಾಂಡರ್ಡ್ ಕನ್ನಡ ಎಂದೂ ಹೇಳುತ್ತಾರೆ. ಈ ಭಾಗಗಳ ಆಡುನುಡಿ ಬೇರೆಯಾಗಿರುತ್ತದೆ. ಆದರೆ ಎಲ್ಲರ ಕನ್ನಡ ಎನ್ನುವುದು ಆಡುನುಡಿಗೆ ಹತ್ತಿರವಾಗಿಲ್ಲ. ಇದು ಬರೀ ಸಂಸ್ಕೃತದಿಂದ ತುಂಬಿಹೋಗಿದೆ. ಹಾಗಾಗಿ ಮಕ್ಕಳಿಗೆ ಈ ಎಲ್ಲರ ಕನ್ನಡವನ್ನು ಕಲಿಯುವುದು ಕಷ್ಟವಾಗುತ್ತದೆ. ಉದಾಹರಣೆಗೆ, ಪ್ರಜಾವಾಣಿಯಲ್ಲಿ ನಾಯಿ ಎನ್ನುವುದಕ್ಕೆ ಶ್ವಾನವೆಂದೂ ಹಲ್ಲು ಎನ್ನುವುದಕ್ಕೆ ದಂತವೆಂದೂ ಬಳಸುತ್ತಾರೆ. ಇದು ಯಾರಿಗೂ ಅರ್ಥವಾಗುವುದಿಲ್ಲ. ಸಂಸ್ಕೃತ ಹಿರಿಮೆಯ ಸಂಕೇತ ಎಂದುಕೊಂಡಿದ್ದೇವೆ. ಇದನ್ನು ಬಿಟ್ಟು ಕನ್ನಡವನ್ನು ಬಳಸುವುದೇ ಹಿರಿಮೆ ಎಂಬುದನ್ನು ಹೇಳಬೇಕು. ಎಲ್ಲರ ಕನ್ನಡ ಅಥವಾ ಸ್ಟ್ಯಾಂಡರ್ಡ್ ಕನ್ನಡವನ್ನು ಆಡುನುಡಿಗೆ ಹತ್ತಿರ ತರಬೇಕು. ಇಲ್ಲಿ ಸಂಸ್ಕೃತ ಕಡಿಮೆ ಇರಬೇಕು ಓದುವ ಹಾಗೆ ಬರೆಯಬೇಕು. ಯಾಕಂದರೆ ಮಹಾಪ್ರಾಣಗಳನ್ನು ಬರೀತೀವಿ. ಆದರೆ ಓದುವುದಿಲ್ಲ. ಆಡುಕನ್ನಡವನ್ನು ಗಮನಿಸಿ ಬರಹಕನ್ನಡವನ್ನು ಸರಿಪಡಿಸಬೇಕು. ಆಗ ಸಂಸ್ಕೃತದ ಹೊರೆ ಕಡಿಮೆಯಾಗಿ ವೈವಿಧ್ಯತೆ ಉಳಿಯುತ್ತೆ. ಕನ್ನಡವನ್ನು ಎಲ್ಲರೂ ಕಲಿಯುವಂತೆ ಆಗುತ್ತೆ.

ಸಿರಾಜ್: ನೀವು ಬಹುವಾಗಿ ಹೇಳುವ ಸಂಸ್ಕೃತ ಹೇರಿಕೆಯ ಪ್ರಶ್ನೆ ಹೊಸದೇನಲ್ಲ. ಕವಿರಾಜಮಾರ್ಗ ಕಾಲದಲ್ಲಿಯೇ ಕನ್ನಡ ಸಂಸ್ಕೃತದ ಮುಖಾಮುಖಿ ಆಗಿ ಕನ್ನಡ ಅದನ್ನು ಜೀರ್ಣಿಸಿಕೊಂಡು ಬೆಳೆದಿದೆ ಎಂಬ ವಾದ ಇದೆ. ಮಾರ್ಗಕಾರನಲ್ಲೇ ಸಂಸ್ಕೃತ ಕನ್ನಡ ಪದಗಳನ್ನು ತಪ್ಪು ತಪ್ಪಾಗಿ ಸೇರಿಸಿ ಆಗಿರುವ ದೋಷಾದೋಷ ನಿರ್ಣಯದ ಚರ್ಚೆ ಇರುವಾಗ ಸಂಸ್ಕೃತದ ಬಗ್ಗೆ ನಿಮಗೆ ಯಾಕಿಷ್ಟು ಆತಂಕ?

ಇದು ಹಾಗಲ್ಲ. ಮೊನ್ನೆ ಮೊನ್ನೆಯವರೆಗೆ ಬರಹ ಓದು ಎಲ್ಲವೂ ನಮ್ಮ ಜನಸಂಖ್ಯೆಯ ಒಂದು ಪರ್ಸೆಂಟ್ ಅಥವಾ ಜೀರೋ ಪಾಯಿಂಟ್ ಒನ್ ಪರ್ಸೆಂಟ್ ಗಿಂತ ಕಮ್ಮಿ ಜನರಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಈಗ ಓದು ಬರೆಯುವವರ ಸಂಖ್ಯೆ ನೂರು ಪರ್ಸೆಂಟ್ ಆಗಬೇಕು. ಎಲ್ಲರ ಕನ್ನಡ ಅಂದರೆ ಅದೇ. ಆದರೆ ಈ ಸಮಸ್ಯೆ ಕವಿರಾಜಮಾರ್ಗದ ಕಾಲದಲ್ಲಿ ಇರಲಿಲ್ಲ. ಹಾಗೆ ನೋಡಿದರೆ ಮಾರ್ಗಕಾರನ ಕಾಲದಲ್ಲಿ ಕನ್ನಡ ಸಂಸ್ಕೃತದ ಮುಖಾಮುಖಿ ಆಗಿಯೇ ಇರಲಿಲ್ಲ. ಆಗಿನ ಕಾಲದಲ್ಲಿ ಸಂಸ್ಕೃತವೇ ಮೊದಲು ನಂತರ ಕನ್ನಡ ಎಂಬ ಸ್ಥಿತಿ ಇತ್ತು. ಸಂಸ್ಕೃತವನ್ನು ಕನ್ನಡ ಜೀರ್ಣಿಸಿಕೊಂಡು ಬೆಳೆದಿದೆ ಎಂದು ಹೇಳುವುದು ಒಂದು ಚಿಕ್ಕ ಗುಂಪಿನ ಚಿಂತನೆ. ಆ ಗುಂಪು ಕನ್ನಡವು ಸಂಸ್ಕೃತದ ಜೊತೆಗಿನ ಮುಖಾಮುಖಿಯಲ್ಲಿ ಗೆದ್ದು ಬಂದಿದೆ ಎಂಬ ಭ್ರಮೆಯಲ್ಲಿದೆ. ಆದರೆ ನಾನು ಒಂದು ದೊಡ್ಡ ಜನಸಮೂಹದ ಪ್ರಶ್ನೆಗಳನ್ನು ಇಟ್ಟುಕೊಂಡು ನನ್ನ ಕೆಲಸದ ಮೂಲಕ ಅವನ್ನು ಬಗೆಹರಿಸಲು ಆಗುತ್ತಾ ಎಂದು ನೋಡುತ್ತಿದ್ದೇನೆ. ಇದು ಈಗ ಅಗತ್ಯವಾಗಿ ಆಗಬೇಕಾದ ಕೆಲಸ. ಇವತ್ತು ಏನಾಗಿದೆಯೆಂದರೆ ಅಪ್ಪರ್ ಕ್ಲಾಸಿನ ಜನ ತಮಗೆ ಬೇಕಾದದ್ದನ್ನೆಲ್ಲ ಇಂಗ್ಲಿಷಿನಿಂದ ಪಡೆಯುತ್ತಾರೆ, ಅವರಿಗೆ ಕನ್ನಡವೂ ಬೇಕಾಗಿಲ್ಲ ಸಂಸ್ಕೃತವೂ ಬೇಕಾಗಿಲ್ಲ. ಕನ್ನಡ ಬೇಕಾಗಿರುವುದು ಬಡವರಿಗೆ, ದಲಿತವರ್ಗದ ಮಕ್ಕಳಿಗೆ. ಅವರಿಗ್ಯಾಕೆ ಸಂಸ್ಕೃತವನ್ನು ಹೇರುತ್ತಾ ಇದೀರಿ? ಕೆ.ವಿ.ನಾರಾಯಣ ಅವರು ಹೇಳುವಂತೆ ಇವತ್ತು ಕನ್ನಡ ಉಳಿಸೋಣ ಎಂದು ಹೇಳುವವರು ಸಂಸ್ಕೃತಮಯವಾದ ಕನ್ನಡವನ್ನು ಉಳಿಸುತ್ತಿದ್ದಾರೆಯೇ ಹೊರತು ನಮ್ಮ ಎಲ್ಲರ ಕನ್ನಡವನ್ನಲ್ಲ. ನಾವು ಉಳಿಸಬೇಕಾಗಿರುವುದು ಬಡವರಿಗೆ ದಲಿತರಿಗೆ ಬೇಕಾಗಿರುವ ಕನ್ನಡವನ್ನ.

ಸಿರಾಜ್: ವಿಚಿತ್ರವೆಂದರೆ ಒಂದೇ ಕಾಲಮಾನದಲ್ಲಿ ನೀವು ಸಂಸ್ಕೃತದ ಹೇರಿಕೆ, ಅದನ್ನು ಬಿಡಿಸಿಕೊಳ್ಳುವ ಬಗ್ಗೆ ಮಾತಾಡುತ್ತಿದ್ದರೆ ಷೆಲ್ಡನ್ ಪೋಲಾಕನಂಥವರು ಕವಿರಾಜಮಾರ್ಗದ ಕಾಲದಿಂದಲೂ ಕನ್ನಡ-ಸಂಸ್ಕೃತದ ನಡುವೆ ಇರುವ ಚಲನಶೀಲ ಸಂಬಂಧದ ಬಗ್ಗೆ ಮಾತಾಡುತ್ತಾನೆ. ಅವನನ್ನು ಓದುವಾಗ ಕನ್ನಡ ಸಂಸ್ಕೃತಗಳು ಎದುರಾಳಿಗಳಲ್ಲ ಎಂಬ ಭಾವನೆ ಬರುತ್ತೆ...

ಮಾರ್ಗಕಾರ ಹೇಳುತ್ತಿರುವುದು ಸಾಹಿತ್ಯವನ್ನು ಗಮನದಲ್ಲಿಟ್ಟುಕೊಂಡೇ ಹೊರತು ಭಾಷೆಯನ್ನಲ್ಲ. ಇಲ್ಲಿಯವರೆಗೆ ಭಾಷೆಯ ಬಗ್ಗೆ, ವ್ಯಾಕರಣದ ಬಗ್ಗೆ ಬರೆದಿರುವವರು ಸಾಹಿತ್ಯವನ್ನು ಗಮನದಲ್ಲಿಟ್ಟುಕೊಂಡು ಮಾತಾಡಿದ್ದಾರೆಯೇ ಹೊರತು ಭಾಷೆಯನ್ನು ಮಖ್ಯವಾಗಿಟ್ಟುಕೊಂಡಿಲ್ಲ. ಪೋಲಾಕನ ಪುಸ್ತಕವನ್ನು ನಾನು ಓದಿಲ್ಲ. ಆದರೂ ಅವನು ಹೇಳುವ ಹಾಗೆ ಸಂಸ್ಕೃತದಿಂದ ಕನ್ನಡ ಹೊಸ ವಿಸ್ತಾರವನ್ನು ಪಡೆದುಕೊಂಡಿದೆ ಎಂಬುದರ ಬಗ್ಗೆ ಐ ಆಮ್ ನಾಟ್ ಶ್ಯೂರ್. ನಾನು ಇದನ್ನು ಒಪ್ಪುವುದು ಕಷ್ಟ.

ಸಿರಾಜ್: ರನ್ನ ನಿಘಂಟುವಿನ ಕಾಲದಿಂದಲೂ ಕನ್ನಡ ಸಂಸ್ಕೃತವನ್ನು ಬ್ರಿಡ್ಜ್ ಮಾಡುವುದೇ ಅವತ್ತಿನ ದೊಡ್ಡ ಗುರಿಯಾಗಿತ್ತು. ಷೆಲ್ಡನ್ ಪೋಲಾಕನು ಹೇಳುವಂತೆ ಕನ್ನಡವು ಸಂಸ್ಕೃತದ ಮೂಲಕ ದೊಡ್ಡದನ್ನು ಪಡೆದುಕೊಂಡಿತು ಎಂಬ ವಾದವೂ ಇದೆ.

ಹೀಗ್ಯಾಕೆ ಆಗುತ್ತೆ ಅಂದರೆ ಆಗ ಕನ್ನಡ ಬಳಸುವವರಿಗೆ ಕನ್ನಡವೂ ಗೊತ್ತಿತ್ತು ಸಂಸ್ಕೃತವೂ ಗೊತ್ತಿತ್ತು. ಆದರೆ ಈಗಿನವರಿಗೆ ಸಂಸ್ಕೃತ ಗೊತ್ತಿಲ್ಲ, ಗೊತ್ತಿರಬೇಕಾಗಿಯೂ ಇಲ್ಲ. ಆಗ ಒಂದು ಸಣ್ಣ ಪರ್ಸೆಂಟೇಜಿನ ಜನ ಕನ್ನಡವನ್ನು ಓದುತ್ತಿದ್ದರು. ಪೋಲಾಕನು ಹೇಳುವ ಹಾಗೆ ಎಲ್ಲವನ್ನು ಪಡೆದುಕೊಂಡಿದ್ದು ಒಂದು ಸಣ್ಣ ಸಮುದಾಯ ಮಾತ್ರ. ಅವರಿಗೆ ಸಂಸ್ಕೃತವೇ ಹೆಚ್ಚು ಗೊತ್ತಿತ್ತು, ಕನ್ನಡವೇನಿದ್ದರೂ ತಮಾಷೆಗೆ ಎನ್ನುವ ಹಾಗೆ. ಅದಕ್ಕೆ ಮೊದಲು ಗುರುಕುಲದಲ್ಲಿ ಸಂಸ್ಕೃತವನ್ನು ಕಲಿಸಿ ನಂತರ ಕನ್ನಡವನ್ನು ಕಲಿಸುತ್ತಿದ್ದರು. ಆದರೆ ಆಗಿನ ಸಮಸ್ಯೆಯೇ ಬೇರೆ ಈಗಿನ ಸಮಸ್ಯೆಗಳೇ ಬೇರೆ. ಈಗ ನಾವು ಎಲ್ಲರಿಗೂ ಭಾಷೆಯನ್ನು ಕಲಿಸಬೇಕಾಗಿದೆ, ಶಿಕ್ಷಣವನ್ನು ನೀಡಬೇಕಾಗಿದೆ. ಅಂದು ಭಾಷೆಯ ಕುರಿತ ಚಿಂತನೆಗಳು ವರ್ಗದ ಹಿತಾಸಕ್ತಿಯಿಂದ ಕೂಡಿದ್ದವು. ಈಗ ಅದು ಸಮುದಾಯದ ಹಿತಾಸಕ್ತಿಯಾಗಿ ರೂಪುಗೊಳ್ಳಬೇಕಿದೆ.

ಮೇಟಿ: ಸಂಸ್ಕೃತವನ್ನು ಸೇರಿದಂತೆ ಅನ್ಯ ಭಾಷಾ ಪದಗಳನ್ನು ಬಿಡುವುದಾದರೆ ಕನ್ನಡದಲ್ಲಿ ಉಳಿಯುವುದೇನು ಎಂಬ ಪ್ರಶ್ನೆಯೂ ಇದೆಯಲ್ಲ?

ಆಡುಮಾತಿನಲ್ಲಿ ನೀವು ನೋಡಿದರೆ ಸಂಸ್ಕೃತ ಪದಗಳೇ ಇಲ್ಲ. ಕುಂವೀಯವರ, ಗೀತಾನಾಗಭೂಷಣ ಅವರ ಕಾದಂಬರಿಗಳಲ್ಲಿ ಸಂಸ್ಕೃತ ಪದಗಳಿಲ್ಲ ಇದ್ದರೂ ತದ್ಭವಗಳ ರೂಪದಲ್ಲಿ ಇವೆ. ನಾಯಿ ಎನ್ನುವ ಕಡೆ ಶ್ವಾನ ಎನ್ನುವ, ಹಲ್ಲು ಎನ್ನುವ ಕಡೆ ದಂತ ಎಂದು ಬಳಸುವುದು ನಮಗಿರುವ ಸಂಸ್ಕೃತದ ವ್ಯಾಮೋಹದಿಂದ. ನಾನು ಹೇಳುತ್ತಿರುವುದೇನೆಂದರೆ ಸಂಸ್ಕೃತದ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ ಅಂತ.

ಮೇಟಿ: ಹಾಗಾದರೆ ಕನ್ನಡಕ್ಕೆ ಎಲ್ಲವನ್ನು ವಿವರಿಸುವ ಶಕ್ತಿ ಇದೆಯೆ?

ಅದು ಕನ್ನಡಕ್ಕೂ ಇಲ್ಲ ಸಂಸ್ಕೃತಕ್ಕೂ ಇಲ್ಲ. ಅದನ್ನು ನಾವು ಹೊಸ ಶಬ್ದಗಳನ್ನು ಟಂಕಿಸುವ ಮೂಲಕ ಪಡೆದುಕೊಳ್ಳಬಹುದು. ಬಿ.ಆರ್.ಲಕ್ಷ್ಮಣರಾವ್ ಅವರು ಒಮ್ಮೆ ನನ್ನ ಬಳಿ ದಿನ ಬಳಕೆಯಲ್ಲಿ ಎಲ್ಲಕ್ಕೂ ಕನ್ನಡ ತಂದು ಹಾಕಿದರೆ ಕಷ್ಟವಾಗುತ್ತದೆ ಎಂದಿದ್ದರು. ಸಂಸ್ಕೃತದಲ್ಲಿ ಗ್ರೀಕಿನಲ್ಲಿ ಏನಾಗಿದೆ ಎಂದು ನೋಡಿದರೆ ಅವರು ತಮಗೆ ಬೇಕಾದ ಹಾಗೆಲ್ಲ ಹೊಸ ಶಬ್ದಗಳನ್ನು ಟಂಕಿಸಿಕೊಂಡಿದ್ದಾರೆ. ಇಂಗ್ಲéಿಷಿನಲ್ಲಿಯೂ ಕೂಡ ಗ್ರೀಕ್ ಲ್ಯಾಟಿನ್ ಪದಗಳನ್ನು ಹಾಗೇ ಬಳಸಿದ್ದಾರೆ. ಆದರೆ ಕಂಪ್ಯೂಟರ್ ವಿಜ್ಞಾನಕ್ಕೆ ಸಂಬಂಧಿಸಿದ ಪದಗಳನ್ನು ಇಂಗ್ಲಿಷಿನ ಮೂಲಕವೇ ಟಂಕಿಸಿಕೊಂಡಿದ್ದಾರೆ. ಅಲ್ಲಿ ಸಾಧ್ಯವಾಗಿದ್ದರೆ ಇಲ್ಲೇಕೆ ಆಗುವುದಿಲ್ಲ? ಸಂಸ್ಕೃತದಿಂದ ಪಡೆದುಕೊಳ್ಳುವಾಗ ಸಂಸ್ಕೃತದಿಂದಲೇ ಪಡೆದುಕೊಂಡಿದ್ದೇವೆ. ಆದರೆ ಇಂಗ್ಲಿಷಿನಿಂದ ಪಡೆದುಕೊಳ್ಳುವಾಗ ಮತ್ತೆ ಸಂಸ್ಕೃತ ಯಾಕೆ? ಉದಾಹರಣೆಗೆ ಇಂಜನಿಯರ್ ಗೆ ಅಭಿಯಂತರ, ಆಲರ್ಟರ್ನೇಷನ್ಗೆ ಪರ್ಯಯನ, ಸಾಫ್ಟವೇರ್ ಗೆ ತಂತ್ರಾಂಶ- ಹೀಗೆ ಮಾಡಿದ್ದರಿಂದ ಕನ್ನಡದಲ್ಲಿರುವ ವಿಜ್ಞಾನದ ಪದಗಳು ಬಹಳ ಕಷ್ಟಕರವಾಗಿವೆ ಅವನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲ ಅಷ್ಟು ಸಂಸ್ಕೃತಮಯವನ್ನಾಗಿ ಮಾಡಿದ್ದೇವೆ.

ಸಿರಾಜ್: ಆದರೆ ಉದಾಹರಣೆಗೆ ಇಂಡೋ ಆರ್ಯನ್ ಭಾಷೆಗಳ ಮೂಲದಿಂದ ಬಂದಿರುವ ಹಲವು ಪದಗಳು ಕನ್ನಡಕ್ಕೆ ಬರುವಾಗ ಹಾಗೇ ಬಂದಿಲ್ಲ. ಅವು ಅರ್ಥವಿಸ್ತಾರವನ್ನೋ, ಅರ್ಥಸಂಕೋಚವನ್ನೋ ಪಡೆದುಕೊಂಡೇ ಬಂದಿವೆ. ಹೀಗಿರುವಾಗ ಅನ್ಯ ಭಾಷೆಗಳಿಂದ ಎರವಲು ಬೇಡ ಎನ್ನೋದು ಎಷ್ಟು ಸರಿ?

ನನ್ನ ಉದ್ದೇಶ ಸಂಸ್ಕೃತದ ಪದಗಳ ಸಹಾಯವಿಲ್ಲದೆ ಕನ್ನಡದಲ್ಲೇ ಬರೆಯಲು ಸಾಧ್ಯ ಎಂಬುದನ್ನು ತೋರಿಸುವುದು. ಕನ್ನಡದ ಖ್ಯಾತ ಲೇಖಕರೊಬ್ಬರಿಗೆ ಹೊಸಬರಹದಲ್ಲಿರುವ ನನ್ನ ಪುಸ್ತಕ `ಕನ್ನಡಕ್ಕೆ ಬೇಕು ಕನ್ನಡದ್ದೇ ಪದಗಳು' ಓದಲು ಕೊಟ್ಟೆ. ಅದರಲ್ಲಿ ನಾನು ಭಾಷಾಂತರಕ್ಕೆ ಬದಲಾಗಿ ನುಡಿಮಾರು, ಭಾಷೆಗೆ ಬದಲಾಗಿ ಸೊಲ್ಲು, ಉದಾಹರಣೆಗೆ ಬದಲಾಗಿ ಎತ್ತುಗೆ ಎಂದೆಲ್ಲ ಬಳಸಿ ಕನ್ನಡದಲ್ಲಿ ಇದೆಲ್ಲವನ್ನೂ ಹೇಳಲು ಸಾಧ್ಯ ಎಂದು ತೋರಿಸಲು ಪ್ರಯತ್ನಿಸಿದ್ದೆ. ಅವರು ನನಗೆ ಅರ್ಥವಾಗಲಿಲ್ಲ ಎಂದರು. ಅಂದರೆ ಅವರಿಗೆ ಸಂಸ್ಕೃತವೇ ಸಹಜವಾಗಿ ಕನ್ನಡ ಅಪರಿಚಿತವಾಗಿಬಿಟ್ಟಿದೆ.

ಮೇಟಿ: ಬೇರೆ ಭಾಷೆಯ ಪದಗಳು ಕನ್ನಡದ ಕಸುವು ಹೆಚ್ಚಿಸಿವೆ ಎಂಬ ವಾದವೂ ಇದೆ?

ಪ್ರೊವೈಡೆಡ್ ಭಾಷೆಗೆ ಆ ಮಿತಿ ಇದ್ದರೆ. ಇಲ್ಲದಿದ್ದರೆ ಅದು ನಾವು ಬಳಸುವ ಭಾಷೆಗೆ ಹೊರೆ. ನನ್ನ ಆಶಯ ಎಲ್ಲವನ್ನೂ ಸಾಧ್ಯವಾದಷ್ಟು ಕನ್ನಡದಲ್ಲಿ ಹೇಳುವುದು. ಅದರಲ್ಲಿ ಹತ್ತು, ಹದಿನೈದು ಪರ್ಸೆಂಟ್ ಫಾರಿನ್ ಪದಗಳಿದ್ದರೆ ತೊಂದರೆಯಿಲ್ಲ. ಪೂರ್ತಿ ಕನ್ನಡದಲ್ಲೇ ಅಗುವುದಿಲ್ಲ ಎಂದು ನನಗೂ ಗೊತ್ತಿದೆ. ಆದರೆ ಈಗಾಗಿರುವಂತೆ ಎಂಬತ್ತು ಪರ್ಸೆಂಟ್ ಸಂಸ್ಕೃತ ಕನ್ನಡದಲ್ಲಿ ಇರಬಾರದು. ಪ್ರಜಾವಾಣಿಯಲ್ಲಿ ಶಿಕ್ಷಣದಂಥ ಎಲ್ಲರಿಗೂ ಉಪಯೋಗಿಯಾಗುವ ವಿಷಯದ ಬಗ್ಗೆ ಬರೆಯುವವರು ಎಪ್ಪತ್ತೈದು ಪರ್ಸೆಂಟ್ ಸಂಸ್ಕೃತ ಪದಗಳನ್ನು ಬಳಸುತ್ತಾರೆ. ಅದನ್ನು ಸಂಸ್ಕೃತ ಲೇಖನ ಎಂದು ಕರೆದರೆ ಒಳ್ಳೆಯದು (ಜೋರು ನಗು). ಕನ್ನಡದಲ್ಲಿ ಅದನ್ನು ಹೇಳಿದರೆ ಎಲ್ಲರಿಗೂ ಗೊತ್ತಾಗುತ್ತೆ, ಪ್ರಯೋಜವಾಗುತ್ತೆ.....

ಸಿರಾಜ್: ಸಂಸ್ಕೃತದ ಪ್ರಭಾವ ಸಾರ್ವತ್ರಿಕವಾಗಿತ್ತು ಎಂದು ಹೇಳುವುದು ಎಷ್ಟು ಸರಿ? ಅದು ಜಾತಿಗಳಿಗೆ, ಉಪಜಾತಿಗಳಿಗೆ, ಪ್ರದೇಶಗಳಿಗೆ ಅನುಗುಣವಾಗಿ ಬದಲಾಗುತ್ತಾ ಹೋಗುತ್ತೆ.

ಅದಕ್ಕೇ ನಾನು ಹೇಳುವುದು ಕನ್ನಡ ಕಲಿಯಬೇಕಾದರೆ ಸಂಸ್ಕೃತ ಬಲ್ಲ ಮೇಲ್ಜಾತಿಯ ಮಕ್ಕಳಿಗೆ ಸ್ವಲ್ಪ ಕಷ್ಟವಾದರೆ ಕೆಳವರ್ಗದ ಮಕ್ಕಳಿಗೆ ಇನ್ನೂ ಕಷ್ಟ. ನನ್ನ ವಾದದ ಹಿಂದಿರುವ ಉದ್ದೇಶ ಏನೆಂದರೆ ನಮ್ಮಲ್ಲಿರುವ ಎಲ್ಲ ಜಾತಿ ವರ್ಗಗಳ ಮಕ್ಕಳೂ ಭಾಷೆ ಕಲಿತು ಶಿಕ್ಷಣದ ಉಪಯೋಗ ಪಡೆದುಕೊಳ್ಳುವಂತಾಗಬೇಕು ಅಂತ. ಮೊನ್ನೆ ನನಗೆ ಗೊತ್ತಿರುವ ಲೇಖಕರೊಬ್ಬರು ಯಕ್ಷಗಾನದಿಂದ ಕೆಳವರ್ಗದ ಮಕ್ಕಳಿಗೂ ಸಂಸ್ಕೃತದ ಉಚ್ಚಾರಣೆ ಸುಲಭವಾಗಿ ಬರುತ್ತೆ ಎಂದು ಹೇಳುತ್ತಿದ್ದರು. ಆದರೆ ಆ ಮಕ್ಕಳಿಗೆ ಎಷ್ಟು ಪದಗಳು ಬರುತ್ತವೆ ಎಷ್ಟರ ಅರ್ಥ ಗೊತ್ತಿದೆಯೋ ನನಗೆ ಗೊತ್ತಿಲ್ಲ.

ಸಿರಾಜ್: ಆದರೆ ಭಾಷೆಯ ಬಳಕೆಯ ವಿಷಯದಲ್ಲಿ ಇತಿಹಾಸವನ್ನು ಮತ್ತೆ ತಿರುಗುಮುರುಗಾಗಿಸಲು ಆಗುತ್ತದೆಯೆ?

ಕನ್ನಡದಲ್ಲಿ ಬೇರೆ ಭಾಷೆಯ ಪದಗಳು, ಅದರ ಪ್ರಭಾವ ಇದೆಲ್ಲವೂ ಕಡಿಮೆ ಪ್ರಮಾಣಕ್ಕೆ ಸೀಮಿತವಾಗಿದ್ದರೆ ಅದು ಸರಿ, ಜಾಸ್ತಿಯಾಗಿ ಅದು ಬೇರೆ ಬಗೆಯ ಕೀಳರಿಮೆಗೆ ದಾರಿ ಮಾಡುವ ಹಾಗಿದ್ದರೆ ಅದು ಹೊರೆ. ನೋಡಿ, ಈಗ ಎತ್ತುಗೆಗೆ ಬದಲಾಗಿ ಉದಾಹರಣೆ ಎನ್ನುವುದೇ ಸಹಜವೇನಲ್ಲ. ಅದರೆ ಅದೇ ಸಹಜ ಅನ್ನಿಸಿದೆ. ಇದನ್ನು ಬದಲಾಯಿಸುವುದೇ ಲ್ಯಾಂಗ್ವೇಜ್ ಪ್ಲ್ಯಾನಿಂಗ್. ಇದರ ಉದ್ದೇಶ ಕನ್ನಡವನ್ನು ಎಲ್ಲರ ಕನ್ನಡವನ್ನಾಗಿ ಮಾಡುವುದು. ಎರಡು ಸಾವಿರ ವರ್ಷದಿಂದ ಮಹಾಪ್ರಾಣಗಳನ್ನು ಬಳಸುತ್ತಾ ಬಂದಿದ್ದೇವೆ. ಅದರಿಂದ ಏನು ಲಾಭ? ಇಲ್ಲಿವರೆಗೆ ಬಳಸುತ್ತಾ ಇದೀವಿ ಅನ್ನೋದನ್ನು ಬಿಟ್ಟರೆ ಅದರಿಂದ ಯಾವ ಲಾಭವೂ ನನಗೆ ಕಾಣುವುದಿಲ್ಲ. ಈ ಹೇರಿಕೆಯ ಚರಿತ್ರೆಯನ್ನು ತೆಗೆದುಹಾಕೋಣ. ಸಂಸ್ಕೃತದ ಹೇರಿಕೆಯೂ ಒಂದು ರೀತಿ ಅಸ್ಪೃಶ್ಯತೆಯ ತರ. ಅದರಿಂದ ಏನು ಪ್ರಯೋಜನ....? ಒಂದು ಸಮಾಜ ಬೆಳೆಯಬೇಕು ಎನ್ನುವುದಾದರೆ ಅದರಲ್ಲಿ ಬದುಕುವ ಎಲ್ಲರೂ ಬೆಳೆಯಬೇಕು, ಯಾವುದೋ ಒಂದು ಕಮ್ಯುನಿಟಿ ಮಾತ್ರ ಉದ್ಧಾರ ಆಗುವುದಲ್ಲ. ಮಹಾಪ್ರಾಣಗಳನ್ನು ಕಡಿಮೆ ಮಾಡಿದರೆ ಸಮಾಜದ ಎಲ್ಲ ಮಕ್ಕಳಿಗೆ ಕನ್ನಡ ಕಲಿಯುವುದು ಸುಲಭವಾಗುತ್ತೆ, ಅದನ್ನೇ ಲ್ಯಾಂಗ್ವೇಜ್ ಪ್ಲ್ಯಾನಿಂಗ್ ನಲ್ಲಿ ನಾವು ಮಾಡಬೇಕಾಗಿರುವುದು. ಹೀಗೆ ಮಾಡುತ್ತ ಹೋದರೆ ಹಳೆಗನ್ನಡ ಸಾಹಿತ್ಯವನ್ನು ಓದುವುದು ಹೇಗೆ ಎಂಬ ಪ್ರಶ್ನೆ ಎದುರಾಗಬಹುದು. ಅದಕ್ಕೆ ನಾನು ಹೇಳುವುದೇನೆಂದರೆ ಹಳೆಗನ್ನಡವಾಗಲಿ ಹೊಸಗನ್ನಡವಾಗಲಿ ಅದನ್ನು ಓದುವಾಗ ಹೇಗೂ ಉಚ್ಚರಿಸುವುದಿಲ್ಲವಲ್ಲ ಅಂತ. ಅದಕ್ಕಾಗೇ ಕನ್ನಡದ ಜಾಯಮಾನಕ್ಕೆ ಹೊಂದುವ ಹಾಗೆ ಬದಲಾವಣೆಗಳನ್ನು ಮಾಡಬೇಕೆಂದು ಸ್ವಲ್ಪ ಹಠದಿಂದಲೇ ಇದನ್ನೆಲ್ಲ ಮಾಡುತ್ತಿದ್ದೇನೆ.

ಮೇಟಿ: ಆದರೆ ಈ ನಡುವೆ ಕೆಲವು ಸಂಘಟನೆಗಳು ಎಲ್ಲರಿಗೂ ಸಂಸ್ಕೃತವನ್ನು ಕಲಿಸಬೇಕು ಎಂದು ಹೇಳುತ್ತಿದ್ದಾರಲ್ಲ ಅದರ ಉದ್ದೇಶ ಏನು?

ಯಾಕೆಂದರೆ ನಿಜವಾಗಿ ಅಂಥ ಸಂಘಟನೆಗಳಿಗೆ ಎಲ್ಲರೂ ತಮ್ಮ ಸಂಸ್ಕೃತಿಯನ್ನೇ ಕಲಿಯಬೇಕು ಎಂಬ ಉದ್ದೇಶ ಇದೆ, ಹಾಗಾಗಿ ಅದಕ್ಕೂ ಮೊದಲು ಸಂಸ್ಕೃತವನ್ನು ಕಲಿಸಿಬಿಟ್ಟರೆ ಸರಿಯಾಗುತ್ತದೆ ಎಂದು ಹೀಗೆಲ್ಲ ಅವರು ಮಾಡುತ್ತಿರಬಹುದು.

ಸಿರಾಜ್: ಹಾಗಾದರೆ ಸಂಸ್ಕೃತ ವಿಶ್ವವಿದ್ಯಾಲಯವನ್ನು ಶುರುಮಾಡುವುದರಿಂದ ಕನ್ನಡಕ್ಕಾಗುವ ಪ್ರಯೋಜನವೇನು?

ಸಂಸ್ಕೃತ ವಿಶ್ವವಿದ್ಯಾನಿಲಯದ ಸ್ಥಾಪನೆಯಿಂದ ಕನ್ನಡಕ್ಕೆ ಏನು ಅಪಾಯವಿಲ್ಲ. ಆದರೆ ಒಂದಿಷ್ಟು ಹಣ ವೇಸ್ಟ್ ಆಗುತ್ತದೆ. ಬೇರೆಲ್ಲಾ ವಿಶ್ವವಿದ್ಯಾನಿಲಯಗಳು ಇರುವ ಹಾಗೆ ಅದೂ ಇರುತ್ತದೆ. ಅದರಿಂದ ಕೆಲವರಿಗೆ ಉದ್ಯೋಗ ಸಿಗಬಹುದು, ಅಷ್ಟೆ. ಹೆಚ್ಚೆಂದರೆ ಅಲ್ಲಿ ನಡೆಯುವ ಕೆಲವು ಸಂಶೋಧನೆಗಳು ಪುಸ್ತಕದ ರೂಪದಲ್ಲಿ ಬರಬಹುದು. ಕನ್ನಡದ ಉದ್ಧಾರವಾಗಬೇಕೆಂದರೆ, ಕನ್ನಡ ಬರಹದಲ್ಲಿ ಸಂಸ್ಕೃತ ಪದಗಳನ್ನು ಕಡಿಮೆ ಮಾಡಬೇಕು ಆವಾಗ ಅದು ಎಲ್ಲರ ಕನ್ನಡವಾಗುತ್ತದೆ. ಕನ್ನಡ ಭಾಷೆ ಬೆಳೆಯಬೇಕಾದರೆ, ಥೆಸಾರಸ್ಸ್ ಗಳನ್ನು ಹಾಗೂ ವಿಜ್ಞಾನ ಪಾರಿಭಾಷಿಕ ಪದಕೋಶಗಳನ್ನು ಬರೆಯಬೇಕು. ವಿಜ್ಞಾನದ ಪ್ರಯೋಗ ಹಾಗೂ ವಿಷಯಗಳನ್ನು ವಿವರಿಸುವಾಗ ನೂರಾರು ಸಂಸ್ಕೃತದ ಪದಗಳನ್ನು ಹಾಕಿ ಅದನ್ನು ಯಾರೂ ಓದದ ಹಾಗೆ ಮಾಡಿಬಿಟ್ಟಿದ್ದಾರೆ. ಇದರಿಂದ ಮಕ್ಕಳಿಗೆ ತೊಂದರೆಯಾಗುತ್ತದೆ. ಈ ತೊಡಕನ್ನು ನಿವಾರಿಸಬೇಕೆಂದರೆ ಕನ್ನಡವನ್ನೇ ಬಳಸಬೇಕು.

ಸಿರಾಜ್: ಇನ್ನೊಂದು ಪ್ರಶ್ನೆ. ಮೂಲ ಸಂಸ್ಕೃತ ಪದಗಳು ಕನ್ನಡದಲ್ಲಿ ಹಾಗೇ ಉಳಿದುಕೊಂಡಿವೆಯಲ್ಲ.... ತತ್ಸಮ ತದ್ಭವಗಳು ಎರಡೂ ಕನ್ನಡದಲ್ಲಿ ಇರುವಾಗ ನಿಮಗೆ ಸಂಸ್ಕೃತದ ಬಗ್ಗೆ ಇಷ್ಟು ಆತಂಕ ಯಾಕೆ?

ನಿಜವಾಗಿ ನೋಡಿದರೆ ಸುಮಾರು ಶಬ್ದಗಳು ತದ್ಭವ ಆಗಿ ಮತ್ತೆ ಸಂಸ್ಕೃತ ಶಬ್ದಗಳೇ ಹಿಂತಿರುಗಿ ಬಂದಿವೆ. ಉದಾಹರಣೆಗೆ ಕನ್ನಡದಲ್ಲಿ ಅಂಕುಸ-ಅಂಕುಶ, ಪಸು-ಪಶು, ಭಕುತಿ-ಭಕ್ತಿ, ರಿಸಿ-ಋಷಿ, ರಕ್ಕಸ-ರಾಕ್ಷಸ -ಹೀಗೆ ಬೇರೆ ಬೇರೆ ಬಗೆಯ ರಿವರ್ಸ್ ರೂಪಾಂತರಗಳು ಕನ್ನಡದಲ್ಲಿ ಆಗಿವೆ. ಇಲ್ಲಿ ನಾವು ನಮ್ಮ ಕನ್ನಡ ರೂಪಗಳನ್ನು ಕಳೆದುಕೊಂಡಿದ್ದೇವೆ. ಮೂಲ ಕನ್ನಡದಲ್ಲಿದ್ದ ರಿಸಿಯೇ ಈಗ ಕೀಳು ರೂಪವಾಗಿ ಸಂಸ್ಕೃತದ ಋಷಿಯೇ ಅಧಿಕೃತ ಎನ್ನಿಸಿಕೊಂಡಿದೆ. ಇದು ಯಾಕೆಂದರೆ ನಮಗೆ ಸಂಸ್ಕೃತದ ಬಗ್ಗೆ ಇರುವ ಕುರುಡು ವ್ಯಾಮೋಹದ ಕಾರಣದಿಂದ.

ಮೇಟಿ: ಪರ್ಶಿಯನ್, ಅರೇಬಿಕ್, ಇಂಗ್ಲಿಷ್ ಮುಂತಾದ ಭಾಷೆಯ ಪದಗಳನ್ನು ವಿರೂಪಗೊಳಿಸಿದರೆ ಯಾರಿಗೂ ಸಮಸ್ಯೆ ಅನಿಸುವುದಿಲ್ಲ. ಆದರೆ ಸಂಸ್ಕೃತದ ಪದಗಳನ್ನು ಸರಿಯಾಗಿ ಉಚ್ಚರಿಸದಿದ್ದರೆ/ಬರೆಯದಿದ್ದರೆ ದೊಡ್ಡ ಅನಾಹುತ ಆಗಿಬಿಡುತ್ತದೆಂಬ ಭಾವನೆ ಇದೆ. ಯಾಕೆ ಹೀಗೆ?

ಯಾಕೆಂದರೆ ಪರ್ಶಿಯನ್-ಅರೇಬಿಕ್ ಭಾಷೆಗಳನ್ನು ಪ್ರತಿನಿಧಿಸುವ ವರ್ಗ ಬಲಶಾಲಿಯಾಗಿಲ್ಲ. ಆದರೆ ಸಂಸ್ಕೃತದ ವಿಷಯದಲ್ಲಿ ಹಾಗಲ್ಲ. ಅದನ್ನು ಪ್ರತಿನಿಧಿಸುವ ವರ್ಗ ಪ್ರಬಲವಾಗಿದೆ. ಮೇಲಾಗಿ ಕನ್ನಡ ಲಿಪಿಯನ್ನು ಬ್ರಾಹ್ಮೀಯಿಂದ ಎರವಲು ಪಡೆದುಕೊಂಡಿದ್ದರಿಂದ ಸಂಸ್ಕೃತ ಪದಗಳನ್ನು ಇರುವ ಹಾಗೇ ಉಚ್ಚರಿಸಬೇಕೆಂಬ ಒತ್ತಾಯ ಹೆಚ್ಚಾಗಿದೆ.

ಮೇಟಿ: ಮಾತಿನಲ್ಲಿ 'ಹ'ಕಾರ ಮತ್ತು ಮಹಾಪ್ರಾಣಗಳನ್ನು ಲೋಪಮಾಡುವುದನ್ನು ಕಂಡರೆ ಅವರಿಂದ ಸಂಸ್ಕೃತಿಯೇ ನಾಶವಾಗಿಬಿಟ್ಟಿತು ಎಂಬ ಧೋರಣೆಯನ್ನು ಬೆಳೆಸಿಕೊಂಡಿದ್ದೇವಲ್ಲ?

ಇದು ಸಂಸ್ಕೃತಿಯ ಪ್ರಶ್ನೆಯೇ ಅಲ್ಲ. ಮಾತಿನಲ್ಲಿ ಅಧಿಕಾರಿ ಎಂದು ಹೇಳುವಾಗ ಮಹಾಪ್ರಾಣ ಬಳಸುವುದಿಲ್ಲ. ಅವು ಬಿದ್ದು ಹೋಗುತ್ತವೆ. ಶಕಾರವನ್ನು ಯಾರಿಗೂ ಸರಿಯಾಗಿ ಉಚ್ಚರಿಸಲು ಆಗುವುದಿಲ್ಲ. ಕನ್ನಡದವರಿರಲಿ ಸಂಸ್ಕೃತ ವಿದ್ವಾಂಸರಿಗೂ ಸರಿಯಾಗಿ ಇದನ್ನು ಉಚ್ಚರಿಸಲು ಆಗುವುದಿಲ್ಲ. ಇದನ್ನು ನಾನು ಚಾಲೆಂಜ್ ಮಾಡಿ ನೋಡಿದ್ದೇನೆ. ಕೃಪೆ ಎನ್ನುವ ಶಬ್ದವನ್ನು ಉಚ್ಚಾರಣೆಯಲ್ಲಿ ಕ್ರುಪೆ ಎಂದು ಹೇಳುತ್ತೇವೆ. ಸಂಸ್ಕೃತ ಭಾಷೆಯ ರಚನೆಯ ಪ್ರಕಾರ 'ಋ' ಒಂದು ಸ್ವರ. ಹಾಗಾಗಿ ಕ್+ಅ+ಋ ಈ ಅನುಕ್ರಮದಲ್ಲಿ ಎರಡು ಸ್ವರಗಳು ಒಟ್ಟಿಗೆ ಬರಲು ಸಾಧ್ಯವಿಲ್ಲ. ಬಹುಶಃ ಋಗ್ವೇದ ಕಾಲದಲ್ಲೂ ಹೀಗೆ ಉಚ್ಚರಿಸುತ್ತಿದ್ದರೋ ಏನೋ ಗೊತ್ತಿಲ್ಲ. ಹಾಗೇ ಮಹಾಪ್ರಾಣಗಳು ಉಚ್ಚಾರಣೆಯಲ್ಲಿ ಇಲ್ಲ ಬರಹ ಕನ್ನಡದಲ್ಲಿ ಮಾತ್ರ ಇವೆ. ಸಂಸ್ಕೃತ ಪಂಡಿತರು ಮಾತ್ರ ಇವನ್ನು ಉಚ್ಚರಿಸಬೇಕು ಎನ್ನುತ್ತಾರೆ.

ಮೇಟಿ: ಹಾಗಾದರೆ ಕನ್ನಡದಲ್ಲಿ ಅವು ಸೇರಿಕೊಂಡದ್ದು ಹೇಗೆ?

ಆಗಲೇ ಹೇಳಿದಂತೆ ಅವು ಬರಹದಲ್ಲಿ ಬಂದಿವೆ, ಉಚ್ಚಾರಣೆಯಲ್ಲಿ ಇಲ್ಲ. ನೀವು ಬೇರೆ ಭಾಷೆಗಳಿಗೆ ಕಂಪೇರ್ ಮಾಡಿ ನೋಡಿದರೆ ಇದು ಚೆನ್ನಾಗಿ ಗೊತ್ತಾಗುತ್ತದೆ. ಅಸ್ಸಾಮಿಯಲ್ಲಿ, ಮರಾಠಿಯಲ್ಲಿ ಬಹಳ ಸರಿಯಾಗಿ ಅವರು ಮಹಾಪ್ರಾಣಗಳನ್ನು ಉಚ್ಚರಿಸುತ್ತಾರೆ. ಸ್ವಲ್ಪಮಟ್ಟಿಗೆ ಧಾರವಾಡದ ಕಡೆ ಮರಾಠಿಯ ಕಾರಣದಿಂದ ಮಹಾಪ್ರಾಣಗಳು ಸಮಸ್ಯೆ ಆಗುವುದಿಲ್ಲ. ಆದರೆ ಮೈಸೂರಿನ ಕಡೆ ಸ-ಶ-ಷ ಗಳು ಹಾಗೂ ಮಹಾಪ್ರಾಣಗಳನ್ನು ಸರಿಯಾಗಿ ಉಚ್ಚರಿಸುವುದು ದೊಡ್ಡ ಸಮಸ್ಯೆಯಾಗಿಬಿಟ್ಟಿದೆ. ಗುಲ್ಬರ್ಗದ ಕಡೆ ಕೆಲವರು ಎಜುಕೇಟೆಡ್ ಮಂದಿ ಮಾತ್ರ ಮಹಾಪ್ರಾಣ ಬಳಸುತ್ತಾರೆ. ಬೇರೆಯವರು ಅಲ್ಲ. ಇದರ ಬಗ್ಗೆ ಮಹದೇವನ್ ಎಂಬುವವರು ಸಂಶೋಧನೆ ಮಾಡಿದ್ದಾರೆ....

ಸಿರಾಜ್: ವಿವಿಧ ಭಾಷಾ ಪ್ರಬೇಧಗಳಿರುವ ನಮ್ಮ ಕರ್ನಾಟಕದಲ್ಲಿ ಒಂದು ಸ್ಟ್ಯಾಂಡರ್ಡೈಜ್ಡ್ ಕನ್ನಡದಲ್ಲಿರುವ ಪಠ್ಯಕ್ರಮವನ್ನು ಹೇರುವ ಬಗ್ಗೆ ಏನು ಹೇಳುತ್ತೀರಿ? ಸಮಸ್ಯೆ ಇರುವುದು ಭಾಷಾ ಮಾಧ್ಯಮದಲ್ಲೋ, ಪಠ್ಯ ಕ್ರಮದಲ್ಲೋ?

ಶಾಲೆಗೆ ಬರುವ ಮಗು ಮನೆಯಲ್ಲಿ ಮಾತಾಡುವ ಭಾಷೆಗಿಂತ ಭಿನ್ನವಾದ ಭಾಷೆಯನ್ನು ಕಲಿಯಲೇಬೇಕು. ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ನೀವು ಹೇಳುವ ಸಮಸ್ಯೆಯನ್ನು ಶಿಕ್ಷಣತಜ್ಞರೇ ಪರಿಹರಿಸಬೇಕು. ಎಲ್ಲರ ಕನ್ನಡವನ್ನು ಇಟ್ಟುಕೊಳ್ಳಬೇಕು ಎಂದು ಹೊರಟಿರುವಾಗ ಈ ಸಮಸ್ಯೆಯನ್ನು ಬಗೆಹರಿಸಲು ಆಗುವುದಿಲ್ಲ. ಆದರೆ ಪಠ್ಯಕ್ರಮದಲ್ಲಿ ಕೊಳ್ಳೇಗಾಲದ ಕನ್ನಡಕ್ಕೂ ಪಠ್ಯಕ್ರಮದ ಕನ್ನಡಕ್ಕೂ ಇರುವ ವ್ಯತ್ಯಾಸ, ವಿಶೇಷತೆಗಳನ್ನು ವಿವರಿಸಿ ಹೇಳುವುದಾದರೆ ಈ ಸಮಸ್ಯೆ ಬಗೆಹರಿಸಬಹುದು. ಹಾಗೇ ಧಾರವಾಡ ಕನ್ನಡಕ್ಕೂ ಪಠ್ಯಕ್ರಮದ ಕನ್ನಡಕ್ಕೂ ಇರುವ ವ್ಯತ್ಯಾಸವನ್ನು ತಿಳಿಸಬೇಕು. ಅದರ ಬಗ್ಗೆ ಮೆಟೀರಿಯಲ್ ತಯಾರು ಮಾಡಬೇಕು. ಹೀಗಾದಾಗ ಮಕ್ಕಳಿಗೆ ಮನೆಯಲ್ಲಿ ತಾವು ಮಾತಾಡುವ ಕನ್ನಡ ಪಠ್ಯಕ್ರಮದಲ್ಲಿ ಬಳಕೆಯಾಗುವ ಕನ್ನಡಕ್ಕಿಂತ ಕೀಳು ಎಂಬ ಮನೋಭಾವ ದೂರವಾಗುತ್ತದೆ. ಅಮೇರಿಕಾದಲ್ಲಿ ಇದನ್ನು ಮಾಡುತ್ತಿದ್ದಾರೆ. ಅಲ್ಲಿ ಆಡು ಭಾಷೆಗೂ ಬರಹಕ್ಕೂ ಇರುವ ವ್ಯತ್ಯಾಸವನ್ನು ತಿಳಿಸುವ ಪ್ರಯತ್ನಗಳು ನಡೆಯುತ್ತಿವೆ. ಈಗ ನಮ್ಮೆಲ್ಲರ ಮೇಲೆ ಅನ್ಯಪ್ರಭಾವ, ವ್ಯಾಕರಣ, ಮಾಧ್ಯಮ, ಪಠ್ಯಕ್ರಮ ಎಲ್ಲವನ್ನೂ ಹೊಸದಾಗಿ ರೂಪಿಸಿಕೊಳ್ಳುವ ದೊಡ್ಡ ಜವಾಬ್ದಾರಿ ಇದೆ.

ಸಿರಾಜ್: ಲಿಪಿಸುಧಾರಣೆಯನ್ನು ಮೊದಲು ಬಿಎಂಶ್ರೀಯವರೂ ಸಹ ಮಾಡಿದ್ದರು. ಅದು ಫಲಕಾರಿಯಾಗಲಿಲ್ಲ. ನೀವು ಮಾಡುತ್ತಿರುವ ಲಿಪಿಸುಧಾರಣೆ ಎಷ್ಟರಮಟ್ಟಿಗೆ ಯಶಸ್ಸು ಕಾಣಬಹುದು?

ಅದು ನನ್ನ ಕೈಯಲ್ಲಿ ಇಲ್ಲ. ಮಾಡಿದರೆ ಒಳ್ಳೆಯದು. ಬಿಎಂಶ್ರೀಯವರು ಮಾಡಿದ ಲಿಪಿ ಸುಧಾರಣೆಯಿಂದ ಹೆಚ್ಚು ಲಾಭ ಆಗಲಿಲ್ಲ. ಅವರು ಮಾಡಿದ ಸುಧಾರಣೆಯಲ್ಲಿ ಒತ್ತಕ್ಷರಗಳನ್ನು ತೆಗೆದು ಅವನ್ನು ಪಕ್ಕಪಕ್ಕದಲ್ಲಿ ಬರೆಯುವುದು ಮುಖ್ಯವಾಗಿತ್ತು. ಅದನ್ನು ಅವರು ತಮಿಳಿನ ಮಾದರಿಯಲ್ಲಿ ಮಾಡಿದ್ದರು. ಶ್ರೀಯವರಿಗೆ ಕನ್ನಡದಲ್ಲಿರುವ ಎಲ್ಲ ಅಕ್ಷರಗಳು ಬೇಕು. ನಾನು ಹೇಳುವಂತೆ ಮಹಾಪ್ರಾಣಗಳು ಬೇಡ ಎನ್ನುವ ನಿಲುವು ಅವರಿಗೆ ಇರಲಿಲ್ಲ.

ಸಿರಾಜ್: ಕನ್ನಡ ಮತ್ತು ತಮಿಳು ಭಾಷೆಗಳೆರಡೂ ಲಿಪಿಯನ್ನ ಬ್ರಾಹ್ಮೀಯಿಂದ ತೆಗೆದುಕೊಂಡವು. ಆದರೆ ತಮಿಳಿನಲ್ಲಿ 31 ಅಕ್ಷರಗಳನ್ನು ಮಾತ್ರ ಉಳಿಸಿಕೊಂಡರು. ನಿಮ್ಮ ಪ್ರಕಾರ ನಾವು ಸಂಸ್ಕೃತದ ಎಲ್ಲ 52 ಅಕ್ಷರಗಳನ್ನು ಕನ್ನಡದಲ್ಲಿ ಉಳಿಸಿಕೊಂಡಿದ್ದರಿಂದಲೇ ನಮ್ಮ ಎಲ್ಲ ಸಮಸ್ಯೆಗಳು ಶುರುವಾದವೆ?

ಕನ್ನಡಕ್ಕೆ ಈಗಿರುವಂತೆ 52 ಅಕ್ಷರಗಳ ಅಗತ್ಯವಿಲ್ಲ. ಮಹಾಪ್ರಾಣ, ಷ ಕಾರ ಇತ್ಯಾದಿಗಳನ್ನು ಹೊರತುಪಡಿಸಿ 31 ಅಕ್ಷರಗಳು ಸಾಕು. ಇದರಿಂದ ಕೆಳವರ್ಗದ ಮಕ್ಕಳಿಗೆ ಮಹಾಪ್ರಾಣ, ಷಕಾರಗಳನ್ನು ಸರಿಯಾಗಿ ಉಚ್ಚರಿಸಲು ಬರುವುದಿಲ್ಲ ಎಂಬ ಕೀಳರಿಮೆ ಕಡಿಮೆಯಾಗುತ್ತದೆ. ಶ-ಷಗಳನ್ನು ಸರಿಯಾಗಿ ಹೇಳಲು ಬರದಿದ್ದರೆ ಅದರಿಂದ ಯಾರಿಗೆ ನಷ್ಟ? ಎಲ್ಲ ಪದಗಳನ್ನು ಓದುವ ಹಾಗೆ ಬರೆಯುವುದರಿಂದ ಉಚ್ಚಾರಣೆ ಮತ್ತು ಅಚ್ಚಿನ ತಪ್ಪುಗಳು ಇಲ್ಲವಾಗುತ್ತವೆ. ಇದರಿಂದ ಬರಹಕ್ಕೂ ಮಾತಿಗೂ ಇರುವ ಅಂತರ ಕಡಿಮೆಯಾಗುತ್ತದೆ. ಇಂಗ್ಲಿಷಿನಲ್ಲಿ ಬರಹಕ್ಕೂ ಉಚ್ಚಾರಣೆಗೂ ನೇರ ಸಂಬಂಧವಿಲ್ಲ. ಅದರಿಂದಾಗಿಯೇ ಇಂಗ್ಲಿಷಿನಲ್ಲಿ ಬಹಳ ಸ್ಪೆಲ್ಲಿಂಗ್ ಸಮಸ್ಯೆಗಳಿವೆ. ಅದು ಯಾರಿಗೂ ದೊಡ್ಡ ಕೊರತೆಯಾಗಿ ಕಾಣುವುದಿಲ್ಲ. ಕೊರಿಯನ್ ಮತ್ತು ಸ್ವೀಡಿಶ್ ಭಾಷೆಗಳಲ್ಲಿ ಈ ಸಮಸ್ಯೆಗಳನ್ನು ಬಗೆಹರಿಸಿಕೊಂಡಿದ್ದಾರೆ. ಸಂಸ್ಕೃತದ ಅಕ್ಷರಗಳನ್ನು ಹೊರತುಪಡಿಸಿ ಕನ್ನಡದಲ್ಲಿ ಉಚ್ಚಾರಣೆಗೂ ಬರಹಕ್ಕೂ ನೇರ ಸಂಬಂಧವಿದೆ. ಹಾಗಾಗಿ ಸಂಸ್ಕೃತದ ಅಕ್ಷರಗಳನ್ನು ಬಿಟ್ಟು ಕನ್ನಡವನ್ನು ಹೇಗೆ ಓದುತ್ತೇವೋ ಹಾಗೇ ಬರೆಯಬೇಕು. ಓದು ಕನ್ನಡವೇ ಬರಹ ಕನ್ನಡವಾಗಬೇಕು.

ಮೇಟಿ: ಲಿಪಿ ಇರುವ ಭಾಷೆಗಳು ಮೇಲು ಲಿಪಿ ಇಲ್ಲದ ಭಾಷೆಗಳ ಕೀಳು ಎನ್ನುವ ನಂಬಿಕೆ ಯಾಕೆ ಇದೆ?

ಹೌದು ಜನಸಾಮಾನ್ಯರಲ್ಲಿ ಅಂತಹ ಒಂದು ನಂಬಿಕೆ ಇದೆ. ಬರಹ ಬೇಕೆಂದರೆ ಲಿಪಿ ಬೇಕು. ಬರಹ ಇಲ್ಲದಿದ್ದರೆ ಆ ಸಮುದಾಯಕ್ಕೆ ಯಾವುದೇ ತರಹದ ಅಡ್ವಾಂಟೇಜ್ ಸಿಗೋದಿಲ್ಲ. ಒಂದು ಸಮುದಾಯ ಶತ ಶತಮಾನಗಳ ಕಾಲ ಬೆಳೆಯಬೇಕೆಂದರೆ ಅವರ ಭಾಷೆಗೆ ಲಿಪಿ ಬೇಕು. ಬರಹವಿಲ್ಲದೇ ಭಾಷೆ ಇರಲಿ, ಆ ಸಮುದಾಯವೇ ಬೆಳೆಯೋದಕ್ಕೆ ಸಾಧ್ಯವಿಲ್ಲ. ಕೆಲವು ವರ್ಷಗಳ ಹಿಂದೆ ಬರಹ ಇದ್ದರೂ ಇಲ್ಲದಿದ್ದರೂ ಒಂದೇ ಆಗಿತ್ತು. ಇದು ಜನಸಾಮಾನ್ಯರ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಆದರೆ ಇವತ್ತು ಎಲ್ಲರಿಗೂ ಬರಹ ಬೇಕೇ ಬೇಕು. ಅವರದೇ ಭಾಷೆಯ ಲಿಪಿಗಳು ಬೇಕೆನ್ನುವ ಅಗತ್ಯವಿಲ್ಲ. ಬೇರೆ ಭಾಷೆಯ ಲಿಪಿಯನ್ನು ಕೂಡ ಅಳವಡಿಸಿಕೊಳ್ಳಬಹುದು. ಉದಾಹರಣೆಗೆ ಮರಾಠಿ, ನೇಪಾಳಿ ಹಿಂದಿ, ಸಂಸ್ಕೃತ ಮುಂತಾದ ಭಾಷೆಗಳು ದೇವನಾಗರಿ ಲಿಪಿಯನ್ನು ಅಳವಡಿಸಿಕೊಂಡಿವೆ.

ಮೇಟಿ: ಭಾರತೀಯ ಎಲ್ಲಾ ಭಾಷೆಗಳಿಗೂ ಒಂದೇ ಲಿಪಿ ಬೇಕು ಎನ್ನುವ ವಾದಗಳು ಕೇಳಿಬರುತ್ತಿವೆ. ಇದಕ್ಕೆ ಏನು ಹೇಳುತ್ತೀರಿ?

ಇಲ್ಲ ಇದು ಸಾಧ್ಯವಾಗಲ್ಲ. ಒಂದೇ ಲಿಪಿ ಆಗಬೇಕು ಎನ್ನುವವರು ಹಿಂದಿಯವರು. ಅವರು ದೇವನಾಗರಿ ಲಿಪಿಯನ್ನೇ ಎಲ್ಲ ಭಾರತೀಯ ಭಾಷೆಗಳು ಅಳವಡಿಸಿಕೊಳ್ಳಬೇಕು ಎನ್ನುತ್ತಿದ್ದಾರೆ. ಅವರು ಕನ್ನಡದ ಲಿಪಿಯನ್ನೇ ಎಲ್ಲರೂ ಅಳವಡಿಸಿಕೊಳ್ಳಲಿ ಎಂದು ಹೇಳುವುದಿಲ್ಲ. ಒಂದೇ ಲಿಪಿ ಬೇಕೆನ್ನುವುದು ಫೂಲಿಶ್ ನೆಸ್. ಈಗ ಕಂಪ್ಯೂಟರ್ ನಲ್ಲಿ ಒಂದೇ ಲಿಪಿಯನ್ನು ಅಟೋಮ್ಯಾಟಿಕ್ ಆಗಿ ಮಾಡಿಕೊಳ್ಳಬಹುದು. ಪ್ರಿಂಟಿಂಗ್ ನಲ್ಲಿ ಮೊಳೆ ಜೋಡಿಸೋದು ಕಷ್ಟವಿಲ್ಲ. ಹಾಗಾಗಿ ಸಮಸ್ಯೆ ಏನು? ಬೇರೆ ಭಾಷೆಯ ಲಿಪಿ ಕಲಿಯಬೇಕೆಂದರೆ ಕೆಲವು ತಾಸುಗಳಲ್ಲಿ ಕಲಿಯಬಹುದು. ವೈಜ್ಞಾನಿಕವಾಗಿ ಹೋಲಿಸಿ ನೋಡಿದರೆ ದೇವನಾಗರಿ ಲಿಪಿ ಕಷ್ಟ. ಕನ್ನಡ ಲಿಪಿ ಸುಲಭ. ತಮಿಳು ಲಿಪಿ ಇನ್ನೂ ಸುಲಭ. ಈ ಭಾಷೆಗೆ ಒತ್ತಕ್ಷರವಿಲ್ಲ. ಇದು ಪ್ರಿಂಟ್ ಮಾಡೋಕೆ ಸರಳವಾಗಿದೆ. ಅದಕ್ಕಾಗಿ ನಮ್ಮ ಲಿಪಿಗಳನ್ನು ನಾವು ಯಾಕೆ ಬಿಡಬೇಕು?

ಸಿರಾಜ್: ಕೆಲವು ಭಾಷೆಗಳಿಗೆ ವಿಶೇಷ ಮಾನ್ಯತೆ ನೀಡುವುದು, ಉದಾಹರಣೆಗೆ ಶಾಸ್ತ್ರೀಯ ಭಾಷೆಯ ಪಟ್ಟ ಕಟ್ಟುವುದು ಈ ಬಗ್ಗೆ ಏನು ಹೇಳುತ್ತೀರ?

ಇದರಿಂದ ಏನೂ ಲಾಭವಿಲ್ಲ.ಯಾಕೆಂದರೆ ಒಂದು ಭಾಷೆಗೆ 2000 ವರ್ಷಗಳ ಇತಿಹಾಸ ಇದೆ ಎನ್ನುವುದು ಸಾಮಾನ್ಯ ಮನುಷ್ಯನ ಮೇಲೆ ಯಾವ ಪ್ರಭಾವವನ್ನೂ ಬೀರುವುದಿಲ್ಲ. ಭಾಷೆಯ ಚರಿತ್ರೆಯನ್ನು ಅದರ ಲಿಖಿತ ಆಧಾರಗಳ ಮೇಲೆ ನಿರ್ಧಾರ ಮಾಡುವುದು ಸರಿಯಾದ ಕ್ರಮ ಅಲ್ಲ. ಅದಕ್ಕಿಂತ ಹಿಂದಿನ ಪ್ರೋಟೋ ಡ್ರಾವಿಡಿಯನ್ ಸಹ ಇದೆಯಲ್ಲ. ಭಾಷೆಯ ಚರಿತ್ರೆಯನ್ನು ನೋಡುವಾಗ ಲಿಖಿತ ರೂಪಗಳಿಗಿಂತ ಹಿಂದಿನ ಭಾಷಾ ರೂಪಗಳನ್ನೂ ಸಹ ನೋಡಬೇಕು. ಅವುಗಳನ್ನು ಹೇಗೆ ಹುಡುಕುವುದು? ಒಂದು ಭಾಷೆ 2000 ವರ್ಷಗಳಷ್ಟು ಹಿಂದಿನದು ಎಂದರೆ ಅದಕ್ಕಿಂತ ಹಿಂದಿನ ಭಾಷಾ ರೂಪಗಳ ಚರಿತ್ರೆಯನ್ನು ಏನು ಮಾಡಬೇಕು. ಹೀಗೆ ಮಾಡುತ್ತ ಹೊದರೆ ತಮಿಳಿನವರು ಅದಕ್ಕಿಂತ ಹಿಂದೆ ಹೋಗಿ ತಮ್ಮ ಪ್ರಾಚೀನತೆಯನ್ನು ಸ್ಥಾಪಿಸುತ್ತಾರೆ. ಇದು ಎಂಡ್ ಲೆಸ್.

ಮೇಟಿ: ಋ ಕಾರವನ್ನು ಬಿಡುವ/ಉಳಿಸಿಕೊಳ್ಳುವ ಬಗ್ಗೆ ದೊಡ್ಡ ಚರ್ಚೆ ಕನ್ನಡದಲ್ಲಿ ನಡೆಯಿತು. ಸಮುದಾಯ ಸಂಸ್ಕೃತಿಗಳ ಬಗ್ಗೆ ಆಳವಾಗಿ ಚಿಂತಿಸಿದವರೂ ಸಹ ಕನ್ನಡದ್ದಲ್ಲದ ಧ್ವನಿಯ ಪರವಾಗಿ ನಿಂತಿದ್ದರು.

ಇದು ನನಗೆ ಆಶ್ಚರ್ಯಕರವಾಗಿ ಕಂಡಿದೆ. ಬಹಳ ಜನರಿಗೆ ಕನ್ನಡದ್ದೇ ಆದ ಅಕ್ಷರಗಳು ನಾಶವಾಗಿ ಹೋಗಿರುವ ಬಗ್ಗೆ ಏನೂ ಅನಿಸಿದ ಹಾಗೆ ಕಾಣುವುದಿಲ್ಲ. ಕನ್ನಡದ್ದೇ ಧ್ವನಿಗಳಾದ ರಳ-ಕುಳಗಳು ಬಿದ್ದುಹೋಗಿವೆ. ಕೆ.ವಿ.ಸುಬ್ಬಣ್ಣನವರು ಋ ಕಾರವನ್ನು ಬಿಡುವುದು ಕಷ್ಟ ಎಂದು ಲೇಖನ ಬರೆದಿದ್ದರು. ತಿರುಮಲೇಶ್ ಅವರೂ ಸಹ ಇದೇ ವಾದ ಮಾಡಿದ್ದರು. ಇಂಥ ಸಂಸ್ಕೃತ ಧ್ವನಿಗಳಿಂದ ಯಾವುದೇ ತರಹದ ಅಡ್ವಾಂಟೇಜ್ ಇಲ್ಲ, ಅದನ್ನು ಯಾರೂ ತೊರಿಸಿಕೊಟ್ಟಿಲ್ಲ. ಇದು ಒಂದು ರೀತಿಯಲ್ಲಿ ಅವರಿಗೆ ಸಂಸ್ಕೃತದ ಬಗ್ಗೆ ಇರುವ ಹೈ ರಿಗಾರ್ಡ್ ನಿಂದ ಬಂದಿದೆ. ಸಂಸ್ಕೃತ ದೇವ ಭಾಷೆ/ದೇವರ ಭಾಷೆ ಎಂಬ ಭಾವನೆ ಬಹಳ ಕಾಲದಿಂದ ಬಂದಿದೆ. ಅದಕ್ಕೆ ಅಷ್ಟು ಮಾನ್ಯತೆ ನೀಡುವುದರಲ್ಲಿ ನನಗೆ ನಂಬಿಕೆ ಇಲ್ಲ. ಹಾಗೆ ನೋಡಿದರೆ ಬಹಳ ಜನ ಕನ್ನಡ ಪಂಡಿತರು ಸಂಸ್ಕೃತದಲ್ಲಿ ದೊಡ್ಡ ಕೆಲಸ ಮಾಡಿದ್ದಾರೆ.

ಸಿರಾಜ್: ಒಂದು ವಿಚಿತ್ರ ಇದೆ. ಕನ್ನಡದ ಬಗ್ಗೆ ಮೂಲಭೂತ ಪ್ರಶ್ನೆಗಳನ್ನು ಕೇಳುತ್ತಾ ದೊಡ್ಡ ಕೆಲಸ ಮಾಡಿರುವ ನೀವು ಹೆಚ್ಚಾಗಿ ಬರೆದಿರುವುದು ಇಂಗ್ಲಿಷಿನಲ್ಲಿ. ಇದನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು?

ಹೌದು, ನಾನು ಇಂಗ್ಲಿಷಿನಲ್ಲಿ ಯೋಚಿಸಿ, ಓದಿದ್ದನ್ನು ಈಗ ಕನ್ನಡದಲ್ಲಿ ಬರೆಯುತ್ತಿದ್ದೇನೆ. ಮೇಲಾಗಿ ಮೊದಲು ಸಂಸ್ಕೃತದಲ್ಲಿ ಇದ್ದ ಹಾಗೆ ಈಗ ಎಲ್ಲ ನಾಲೆಜ್ ಇರುವುದು ಇಂಗ್ಲಿಷಿನಲ್ಲಿ. ಕನ್ನಡದಲ್ಲಿ ನಾನು ಬರೆದದ್ದನ್ನು ಚರ್ಚಿಸುವ ವಾತಾವರಣ ಇರಲಿಲ್ಲ. ಬರೆದದ್ದನ್ನು ಓದುವವರಿಲ್ಲದಿದ್ದರೆ ಏನು ಮಾಡಬೇಕು. ಕನ್ನಡದಲ್ಲಿ ನಾನು ಎಪ್ಪತ್ತರ ದಶಕದಲ್ಲಿ ಒಂದೂವರೆ ವರ್ಷ ಕಷ್ಟ ಪಟ್ಟು ಬರೆದ ಪುಸ್ತಕವನ್ನು ಸರಿಯಾಗಿ ಚರ್ಚಿಸುವ ವಾತಾವರಣ ಇದ್ದಿದ್ದರೆ ನಾನು ಇಂಗ್ಲಿಷಿನಲ್ಲಿ ಹೆಚ್ಚು ಬರೆಯುತ್ತಿರಲಿಲ್ಲ. ಆಗ ನಾನು ಒಂದು ರೀತಿಯ ಫ್ರಸ್ಟ್ರೇಶನ್ ಗೆ ಒಳಗಾದೆ. ಆ ಪುಸಕ್ತಕ್ಕೆ ಒಂದು ರಿವ್ಯೂ ಸಹ ಬರಲಿಲ್ಲ. ಈಗ ನಿಧಾನಕ್ಕೆ ವಾತಾವರಣ ಬದಲಾಗುತ್ತಿದೆ.

ಮೇಟಿ: ಭಾಷಾ ಬಳಕೆಯಲ್ಲಿ ಸರಿತಪ್ಪುಗಳು ಇಲ್ಲ ಎಂಬ ವಾದವನ್ನು ಭಾಷಾವಿಜ್ಞಾನಿಗಳು ಮಂಡಿಸುತ್ತಾರೆ. ಆದರೆ ಈ ವಾದಕ್ಕೆ ಮನ್ನಣೆ ಸಿಕ್ಕಿಲ್ಲ ಯಾಕೆ?

ಮಹಾಪ್ರಾಣಗಳು ಕನ್ನಡದ ಉಚ್ಛಾರಣೆಯಲ್ಲಿಲ್ಲ ಬರವಣಿಗೆಯಲ್ಲಿ ಮಾತ್ರ ಇವೆ. ಇವು ಸಂಸ್ಕೃತದ ಬಾರೋವಿಂಗ್ಸ್ ನಲ್ಲಿ ಇವೆ. ಯಾರಿಗೆ ಸಂಸ್ಕೃತದ ಮೇಲೆ ಮೋಹವಿದೆಯೋ ಅವರು ಇದನ್ನು ಸಂಸ್ಕೃತದಂತೆ ಬರೆಯಬೇಕು ಎನ್ನುತ್ತಾರೆ. ಮುಖ್ಯವಾಗಿ ಎಲ್ಲರೂ ತಿಳಿದುಕೊಳ್ಳಬೇಕಾಗಿರುವುದು ಏನೆಂದರೆ ಕನ್ನಡವು ಸಂಸ್ಕೃತದ ವಿಕೃತರೂಪವಲ್ಲ. ಕನ್ನಡವನ್ನು ಹೇಗೆ ಓದುತ್ತೇವೋ ಹಾಗೇ ಬರೆಯಬೇಕು. ಬರಹಕನ್ನಡ ಸರಿ ಆಡುಕನ್ನಡ ತಪ್ಪು ಎಂಬ ವರ್ಗೀಕರಣವೇ ತಪ್ಪು. ಭಾಷಾವಿಜ್ಞಾನಿ ಸರಿ ತಪ್ಪು ಅನ್ನುವ ವರ್ಗೀಕರಣವನ್ನೇ ಒಪ್ಪುವುದಿಲ್ಲ. ಸಂಸ್ಕೃತ ಪಂಡಿತರು ಬರಹ ಮೇಲು ಮಾತು ಕೀಳು ಎನ್ನುವ ಡೈಕಾಟಮಿಯನ್ನು ಸೃಷ್ಟಿಸಿದರು.

ಮೇಟಿ: ಕನ್ನಡ ಬರಹ ಸರಿಪಡಿಸೋಣ ಎನ್ನುವ ಚಿಂತನೆಯ ಹಿಂದಿನ ಉದ್ದೇಶ ಸಂಸ್ಕೃತಿ ಉದ್ಧಾರವೇ?

ಇಲ್ಲ, ನಾನು ಸಂಸ್ಕೃತಿಯ ಬಗ್ಗೆ ಮಾತಾಡುವುದಿಲ್ಲ. ಅಪ್ಪರ್ ಕ್ಲಾಸ್ ಮಕ್ಕಳಿಗೆ ಕನ್ನಡ ಬರಹ ಬೇಕಾಗಿಲ್ಲ. ಕೆಳವರ್ಗದ ಮತ್ತು ಬಡವರ ಮಕ್ಕಳು ಮಾತ್ರ ಕನ್ನಡ ಮಾಧ್ಯಮ ಶಾಲೆಗೆ ಹೋಗುತ್ತಾರೆ. ಕನ್ನಡ ಬರಹದ ಉದ್ಧಾರಕ್ಕಾಗಿ ಕನ್ನಡ ಬರಹ ಸರಿಪಡಿಸಬೇಕಿದೆ. ಬರಹ ಇಲ್ಲಿಯವರೆಗೆ ಕೆಲವೇ ಕೆಲವು ಜನರ ಸೊತ್ತಾಗಿತ್ತು. ಈಗ ಅದು ಎಲ್ಲರ ಸೊತ್ತಾಗಬೇಕು. ವಿಜ್ಞಾನ ಮುಂತಾದ ವಿಷಯಗಳನ್ನು ಕಲಿಸುವಾಗ ಸಂಸ್ಕೃತದ ತ್ರಿಶಂಕು ಪದಗಳನ್ನು ಕಾಯಿನ್ ಮಾಡಿ ಕಲಿಸುತ್ತಿದ್ದರು. ಇದರಿಂದ ಮಕ್ಕಳ ಕಲಿಕೆ ಕಷ್ಟವಾಗುತ್ತಿದೆ. ಕನ್ನಡ ಪದಗಳನ್ನು ಬಳಸಿದರೆ ಮಕ್ಕಳಿಗೆ ಕಲಿಕೆ ಸಲಭವಾಗುತ್ತದೆ. ಕನ್ನಡ ಬರಹದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವುಗಳನ್ನು ಸರಿಪಡಿಸೋದೇ ನಮ್ಮ ಉದ್ದೇಶ.

ಮೇಟಿ: ಭಾಷೆಯ ಉದ್ಧಾರ ಅದು ಸಂಸ್ಕೃತಿಯ ಉದ್ಧಾರವಲ್ಲವೇ?

ವಚನಕಾರರು ಎಲ್ಲರನ್ನು ತಲುಪಬೇಕೆಂದು, ಅದು ಬರಹದ ಮೂಲಕವಲ್ಲ ಮಾತಿನ ಮೂಲಕ ಅದಕ್ಕಾಗಿ ಅವರು ಎಲ್ಲರ ಕನ್ನಡವನ್ನು ಬಳಸಿದರು. ಅವರು ಮಾಡಿದ್ದು ಅದು ಸಾಮಾಜಿಕ ಚಳುವಳಿ. ಭಾಷಾ ಚಳುವಳಿಯಲ್ಲ. ಬೌದ್ಧರು ಪಾಲಿಯನ್ನು ಹಾಗೂ ಜೈನರು ಪ್ರಾಕೃತವನ್ನು ಬಳಸಿದರು. ಇದಕ್ಕೆ ಕಾರಣ ಹೆಚ್ಚಿನ ಜನರಿಗೆ ಇವರ ವಿಚಾರಗಳು ಅರ್ಥವಾಗಲಿ ಎನ್ನುವುದಾಗಿತ್ತು.

ಮೇಟಿ: ಇವರೆಲ್ಲರೂ ಸಂಸ್ಕೃತಿಯ ಉದ್ಧಾರಕ್ಕಾಗಿ ಭಾಷೆಯನ್ನು ಒಂದು ಅಸ್ತ್ರವನ್ನಾಗಿ ಬಳಸಿಕೊಂಡಿದ್ದಾರಲ್ಲವೇ?

ಹೌದು, ಇವರು ಭಾಷೆಯನ್ನು ಒಂದು ಅಸ್ತ್ರವಾಗಿ ಬಳಸಿಕೊಂಡಿದ್ದಾರೆ. ಬರಹದಿಂದ ನಾವೆಲ್ಲರೂ ಏನು ಲಾಭ ಪಡೆಯುತ್ತೇವೋ ಅದನ್ನು ಎಲ್ಲರೂ ಪಡೆಯಲಿ ಅನ್ನುವುದೇ ನಮ್ಮ ಉದ್ದೇಶ.

ಮೇಟಿ: ಬರಹದಲ್ಲಿ ಆಗುವ ಮಾರ್ಪಾಡುಗಳನ್ನು ಗಮನಿಸಿ ಭಾಷಾಶಾಸ್ತ್ರಜ್ಞರು ಭಾಷಾಚರಿತ್ರೆಯನ್ನು ಕಟ್ಟುತ್ತಾರೆ. ಆದರೆ ನಿಮ್ಮ 'ಕನ್ನಡ ಭಾಷೆಯ ಕಲ್ಪಿತ ಚರಿತ್ರೆ' ಪ್ರಕಾರ ಆಡುನುಡಿಗಳ ಬದಲಾವಣೆಗಳನ್ನು ಒಳಗೊಳ್ಳದೆ ಇರುವುದರಿಂದ ಭಾಷಿಕ ಬದಲಾವಣೆಗಳನ್ನು ವರ್ಣಿಸುವ ಬಗೆ ಕಲ್ಪಿತವೇ ಅಥವಾ ಬರಹದಲ್ಲಿರುವುದೇ ಕಲ್ಪಿತವೇ?

ಹಾಗಲ್ಲ ಅದು ಭಾಷೆಯ ಚರಿತ್ರೆಯನ್ನು ಕಟ್ಟುವ ಬಗೆ ಕಲ್ಪಿತ ಹೊರತು ಬರಹದಲ್ಲಿರುವುದು ಕಲ್ಪಿತವಲ್ಲ. ಉದಾಹರಣೆಗೆ ಕನ್ನಡ ಮತ್ತು ತಮಿಳು ಎರಡು ಒಂದೇ ಆಗಿರುವ ಕಾಲಕ್ಕೆ ಮರಳಿ ಹೋಗಿ ಆ ಎರಡು ಭಾಷೆಗಳನ್ನು ಹೋಲಿಸಿ ಅವುಗಳ ಕಾಲವನ್ನು ನಿರ್ಧರಿಸುವ ಬಗೆ ಕಲ್ಪಿತವಾಗಿರುತ್ತದೆ. ಆ ಎರಡು ಭಾಷೆಯ ಪದಗಳನ್ನು ಹೋಲಿಸಿ ನೋಡಬೇಕು. ಉದಾಹರಣೆಗೆ ತಮಿಳಿನಲ್ಲಿ ವೆಳ್ಳ್ ಇದೆ ಕನ್ನಡದಲ್ಲಿ ಬಿಳಿ ಇದೆ. ಇವೆರಡನ್ನು ಕಂಪೇರ್ ಮಾಡಿ ಯಾವುದು ಮೊದಲು ಅನ್ನುವುದನ್ನು ಗುರುತಿಸಬೇಕು. ಇಂತಹ ಹೋಲಿಕೆ ಕನ್ನಡದಲ್ಲಿಯೇ ಸಾಧ್ಯವಿದೆ. ಉದಾಹರಣೆಗೆ ಬಿಳಿ ಹಾಗೂ ಬೆಳ್ಳಗೆ ಎರಡೂ ಕನ್ನಡದಲ್ಲಿವೆ. ಇದು ಬಹುಶಃ ಪೂರ್ವಹಳಗನ್ನಡದ ವಡ್ಡಾರಧನೆಯಲ್ಲಿ ವೆ>ಬೆ ಆಗಿ ಬೆಳ್ಳ್ ಅನ್ನುವುದು ಇಕಾರ ಅಥವಾ ಉಕಾರ ಬಂದಾಗ ಬಿಳಿ ಆಗಿರಬಹುದು. ಇದಕ್ಕೆ ಇಂಟರ್ನಲ್ ರೀ-ಕನ್ ಸ್ಟ್ರಕ್ಸನ್ ಎಂದು ಹೇಳುತ್ತಾರೆ. ಈ ಬದಲಾವಣೆ ಹವ್ಯಕ ಹಾಗೂ ಕೋಸ್ಟಲ್ ಕನ್ನಡದಲ್ಲಿ ಆಗಿಲ್ಲ. ಇದನ್ನು ಮೂಲದ್ರಾವಿಡಕ್ಕೆ ಹೋಲಿಸಿ ನೋಡಬಹುದು. ಇಂತಹ ರೀ-ಕನ್ ಸ್ಟ್ರಕ್ಸನ್ ಗೆ ಯಾವುದೇ ಡಾಟಾ ಇಲ್ಲ. ಹಾಗಾಗಿ ಭಾಷೆಯ ಚರಿತ್ರೆಯನ್ನ ಕಟ್ಟುವ ಬಗೆ ಕಲ್ಪಿತವಾಗಿರುತ್ತದೆ.

ಮೇಟಿ: ಹಾಗಾದರೆ ಪ್ರೊ. ಎಸ್ ಶಟ್ಟರ್ ಅವರು ಇತ್ತೀಚಿಗೆ ಬರೆದ `ಶಂಗಂ ತಮಿಳಗಂ ಮತ್ತು ಕನ್ನಡ ನಾಡು ನುಡಿ' ಪುಸ್ತಕವು ಕನ್ನಡ ಭಾಷೆಯ ಚರಿತ್ರೆಯನ್ನು ಕಟ್ಟುವ ಕುರಿತು ಏನು ಹೇಳುತ್ತದೆ?

ಈ ಪುಸ್ತಕದಲ್ಲಿ ಭಾಷೆಯ ಚರಿತ್ರೆಯನ್ನು ಕಟ್ಟುವ ಚರ್ಚೆಗಳು ಬಂದಾಗಲೆಲ್ಲ ಅವರು ಅವಾಯ್ಡ್ ಮಾಡ್ತಾರೆ. ಭಾಷೆಯ ಬಗೆಗೆ ಅವರು ಹೆಚ್ಚಿನದನ್ನು ಹೇಳಲ್ಲ. ಕೆಲವು ವರ್ಡ್ಸ್ ಗಳನ್ನಿಟ್ಟುಕೊಂಡು ಚರ್ಚೆ ಮಾಡಿದರೆ, ಅದು ಭಾಷೆ ಅಥವಾ ವ್ಯಾಕರಣದ ಬಗ್ಗೆ ಏನೂ ಹೇಳಿದಂತಲ್ಲ. ಪುಸ್ತಕ ಓದಿ ನೋಡಿದೆ. ಅದು ಭಾಷೆಯ ಬದಲಾವಣೆಯ ಕುರಿತು ಏನನ್ನೂ ಹೇಳಿದಂತಿಲ್ಲ. ಭಾಷೆಯ ಚರಿತ್ರೆಯ ಬಗ್ಗೆ ಮಾತನಾಡುವಾಗ ಕೆಲವು ಸ್ಟ್ರಕ್ಚರ್ಸ್ ಅಥವಾ ಸೆಂಟನ್ಸ್ ಗಳನ್ನು ಗಮನಿಸಬೇಕಾಗುತ್ತೆ. ಕನ್ನಡ ಅಂತ ಹೇಳೋಕೆ ಕೆಲವು ಕಾರಣಗಳಿರುತ್ತವೆ. ಕನ್ನಡ ಮತ್ತು ತಮಿಳಿಗೆ ಏನು ವ್ಯತ್ಯಾಸ ಇದೆ. ಕನ್ನಡವನ್ನು ಕನ್ನಡವಾಗಿಸುವ ಹಾಗೂ ತಮಿಳನ್ನು ತಮಿಳಾಗಿಸುವ ಅಂಶಗಳು ಯಾವುವು ಎಂಬುದನ್ನು ಅವರು ಚರ್ಚಿಸಿಲ್ಲ. ಅಂದರೆ, ಕನ್ನಡದ ಅನನ್ಯತೆ ಗುರುತಿಸುವಲ್ಲಿ, ಅದರ ರಚನೆಯ ಸ್ವರೂಪ ಹೇಗಿದೆ ಅನ್ನುವುದನ್ನು ಅವರು ಗುರುತಿಸಿಲ್ಲ. ಉದಾಹರಣೆಗೆ ತಮಿಳಿನಲ್ಲಿ ಕ್>ಚ್ [ಕೇರಿ>ಚೇರಿ] ಧ್ವನಿಯಾಗಿ ಬದಲಾವಣೆ ಆಗಿದೆ. ಈ ಚೇಂಜ್ ಕನ್ನಡದಲ್ಲಿ ಆಗಿಲ್ಲ. ಈ ಚೇಂಜ್ ಯಾವಾಗ ಆಯ್ತೋ ಆವಾಗ ತಮಿಳಿಗೆ ಒಂದು ಐಡೆಂಟಿಟಿ ಸಿಕ್ಕಿದೆ. ಮತ್ತು ಕನ್ನಡಕ್ಕೂ ಒಂದು ಐಡೆಂಟಿಟಿ ಸಿಕ್ಕಿದೆ. ಇದರ ಬಗ್ಗೆ ಅವರು ಏನಾದರೂ ಹೇಳಿದ್ದಾರಾ? ಇಲ್ಲ. ಹಾಗಾಗಿ ಅದರ ಬಗ್ಗೆ ನಾನೇನು ಹೇಳಲ್ಲ. ಅದು ಸರಿಯೋ ತಪ್ಪೋ, ಅವರ ಹಿಸ್ಟಾರಿಕಲ್ ಪರ್ ಸ್ಪೆಕ್ಟಿವ್ ನನಗಿಲ್ಲ.

ಮೇಟಿ: ಶಬ್ದಮಣಿದರ್ಪಣವನ್ನು ಕುರಿತು ನೀವು ಬರೆದಿದ್ದೀರಿ. ಬಹಳ ಕಾಲದಿಂದ ಅದನ್ನು ವಿಶ್ವವಿದ್ಯಾಲಯಗಳು, ಪಂಡಿತರು ಅದನ್ನು ಎತ್ತಿಹಿಡಿಯುತ್ತ ಬಂದಿದ್ದರೂ ಒಟ್ಟಾಗಿ ಅದರ ಪ್ರಾಮುಖ್ಯತೆಯನ್ನೇ ನೀವು ಅಲ್ಲಗಳೆದಿದ್ದೀರ.....

ಕಾರಣ ಏನು ಅಂದರೆ ಅವನು ಅದನ್ನು ಬರೆದು ನೂರಾರು ವರ್ಷಗಳು ಕಳೆದಿದ್ದರೂ ಅದು ಸರಿಯೋ ತಪ್ಪೋ ಎಂದು ಹುಡುಕುವ ಗೋಜಿಗೇ ಹೋಗಿಲ್ಲ. ನಮ್ಮಲ್ಲಿ ಒಂದು ಕಾಮೆಂಟರಿ ಮೆಂಟಾಲಿಟಿ ಇದೆ. ರಾಮಾನುಜ ಶಂಕರಾಚಾರ್ಯರೂ ಸಹ ಕಾಮೆಂಟರಿ ಬರೆದರೇ ವಿನಾ ಇಂಡಿಪೆಂಡೆಂಟಾಗಿ ಬರೆಯಲಿಲ್ಲ. ಇದರಿಂದ ನಾವು ಬಹಳ ಕಾಲ ಸ್ವತಂತ್ರವಾಗಿ ಬೆಳೆಯಲು ಸಾಧ್ಯವಾಗಲೇ ಇಲ್ಲ. ಹೀಗಾಗಿ ಶಬ್ದಮಣಿದರ್ಪಣದಲ್ಲಿ ತಪ್ಪು ಕಂಡರೂ ಇದೆ ಎಂದು ಹೇಳಲಿಲ್ಲ. ಅದು ಮುಖ್ಯವಾಗಿ ಸಂಸ್ಕೃತದ ಬಗ್ಗೆ ಇದೆಯೇ ಹೊರತು ಕನ್ನಡದ ಬಗ್ಗೆ ಅಲ್ಲ. ಕನ್ನಡದ ಬಗ್ಗೆ ಕೆಲವು ಪ್ರಸ್ತಾಪಗಳು ಇದ್ದರೂ ಅವನು ಹೇಳುವುದರಲ್ಲಿ ಎಪ್ಪತ್ತೈದು ಭಾಗ ತಪ್ಪುಗಳೇ ತುಂಬಿಕೊಂಡಿವೆ. ಮೇಲಾಗಿ ಕೇಶಿರಾಜ ಕವಿಯೇ ಹೊರತು ಪಾಣಿನಿಯಂಥ ದೊಡ್ಡ ಸ್ಕಾಲರ್ ಅಲ್ಲ. ಅವನಲ್ಲೂ ಸಹ ಭಾಷೆಯ ಬಗ್ಗೆ ಬರುವ ಪ್ರಸ್ತಾಪಗಳು ಮುಖ್ಯವಾಗಿ ಸಾಹಿತ್ಯವನ್ನು ಗುರಿಯಾಗಿ ಇಟ್ಟುಕೊಂಡು ಹೇಳಿರುವಂಥವೇ ಆಗಿವೆ.

ಮೇಟಿ: ನಿಮ್ಮ ಪ್ರಕಾರ ಶಾಲಾ ವ್ಯಾಕರಣದ ಸ್ವರೂಪ ಹೇಗಿರಬೇಕು?

ಶಾಲೆಯಲ್ಲಿ ವ್ಯಾಕರಣ ಕಲಿಸ್ತಾರೆ ಇಲ್ಲಿಯವರೆಗೆ ಏನು ಕಲಿಸಿದರೋ ಅದರಿಂದ ಏನೂ ಪ್ರಯೋಜನವಾಗಿಲ್ಲ. ವ್ಯಾಕರಣ ಕಲಿಸೋದು ಬೇಡ ಮಕ್ಕಳು ಹೇಗಾದರೂ ಭಾಷೆ ಕಲಿತಾರೆ ಎಂದೂ ತೀರ್ಮಾನ ಮಾಡಿದ್ದರು. ಆದರೆ ಪಾಲಕರು ಹೇಳೋದೆನಂದರೆ ನೀವು ವ್ಯಾಕರಣ ಕಲಿಸಲ್ಲ ಅದಕ್ಕೆ ಮಕ್ಕಳು ಭಾಷೆಯನ್ನು ಕಲಿತಾಯಿಲ್ಲ. ವ್ಯಾಕರಣ ಕಲಿಸಬೇಕು ಆದರೆ ಯಾವ ತರಹದ ವ್ಯಾಕರಣ ಕಲಿಸಬೇಕು ಅನ್ನುವುದು ಮುಖ್ಯ. ಮಕ್ಕಳಿಗೆ ಉಪಯೋಗವಾಗುವಂತಹ ವ್ಯಾಕರಣ ಕಲಿಸಬೇಕು. ಸಂಸ್ಕೃತದ ಸಂಧಿ ಸಮಾಸಗಳನ್ನು ಕನ್ನಡದ ಮಕ್ಕಳಿಗೆ ಕಲಿಸುವುದರಿಂದ ಏನು ಲಾಭ? ವ್ಯಾಕರಣದಲ್ಲಿ ಯಾವುದು ಬೇಕು ಅಂದರೆ ಬರವಣಿಗೆ ಹಾಗೂ ಮಾತಿಗೆ ಯಾವುದು ಬೇಕು ಅದನ್ನ ಮಾತ್ರ ಕಲಿಸಿದರೆ ಸಾಕು.

ಸಿರಾಜ್: ಜಾಗತೀಕರಣದಿಂದ ಕನ್ನಡವೂ ಸೇರಿದಂತೆ ಹಲವಾರು ಭಾಷೆಗಳು ಕಣ್ಮರೆಯಾಗುವ ಅಪಾಯದ ಬಗ್ಗೆ ಏನು ಹೇಳುತ್ತೀರಿ.

ಇದನ್ನು ಪೂರ್ತಿ ಒಪ್ಪಲು ಸಾಧ್ಯವಿಲ್ಲ. ಭಾಷೆ ಮರೆಯಾಗುತ್ತದೆ ಅಂದರೆ ಅದನ್ನು ಮಾತನಾಡುವ ಸಮುದಾಯವೂ ಮರೆಯಾಗಿದೆ ಎಂದು ಅರ್ಥ. ಪ್ರಾಣಿ ಪಕ್ಷಿಗಳು ಮರೆಯಾಗುವ ಹಾಗೆ, ಜೀವ ವೈವಿಧ್ಯತೆ ಕಾಣೆಯಾಗುವ ಹಾಗೆ ಭಾಷೆಗಳೂ ಕ್ರಮೇಣ ಮರೆಯಾಗುತ್ತಿವೆ.

ಸಿರಾಜ್: ಸದ್ಯ ಹೆಗ್ಗೋಡಿನಲ್ಲಿ ನೀವು ನೆಲೆಸಿದ್ದೀರಿ. ನೀನಾಸಂ ಸಂಸ್ಕೃತಿಯ ಕ್ಷೇತ್ರದಲ್ಲಿ ಮಾಡುವುದನ್ನು ನೀವು ಭಾಷೆಯಲ್ಲಿ ಮಾಡುತ್ತಿದ್ದೀರಿ. ಇದು ನಿಮ್ಮ ಕೆಲಸಕ್ಕೆ ಹೇಗೆ ಪೂರಕವಾಗಿದೆ?

ಸುಬ್ಬಣ್ಣ ಅವರು ಇದ್ದಾಗ ಹಲವು ಬಾರಿ ನನ್ನನ್ನು ಕರೆದಿದ್ದರು. ನಾನು ಸ್ವಲ್ಪ ಸಂಕೋಚದ ಮನುಷ್ಯನಾಗಿರುವುದರಿಂದ ಹೋಗಲಿಲ್ಲ. ಆದರೆ ನೀನಾಸಂನ ಕೆಲಸಕ್ಕೂ ನನ್ನ ಕೆಲಸಕ್ಕೂ ಅಂತಹ ಸಂಬಂಧ ಇಲ್ಲ. ನಾನು ಇಲ್ಲಿನ ತಂಪು ವಾತಾವರಣದ ಬಗ್ಗೆ ಕೇಳಿ ಅಕ್ಷರ ಅವರಿಗೆ ಫೋನ್ ಮಾಡಿದೆ. ಆಗ ಅವರ ಬಳಿ ಹೇಳಿದ್ದು: ನಾನು ನಿಮ್ಮಲ್ಲಿಗೆ ಬಂದು ಹವ್ಯಕರ ಭಾಷೆಯ ಬಗ್ಗೆ ಕೆಲಸಮಾಡುತ್ತೇನೆ ಎಂದು. ನಂತರ ಮಾಡಲಿಲ್ಲ, ಅವರು ಕೇಳಲಿಲ್ಲ. ಅದು ಬೇರೆ ಮಾತು.....(ನಗು). ನನ್ನ `ಮಾತಿನ ಒಳಗುಟ್ಟು' ಪುಸ್ತಕವನ್ನು ಅವರೇ ಪ್ರಿಂಟ್ ಮಡುತ್ತೇನೆ ಎಂದಿದ್ದರು. ಆದರೆ ಅದನ್ನು ನಾನು ಹೊಸ ಬರಹದಲ್ಲಿ ಬರೆದದ್ದು ಅವರಿಗೆ ಇಷ್ಟವಾಗಲಿಲ್ಲ ಅನಿಸುತ್ತೆ.

ಸಿರಾಜ್: ಕನ್ನಡ ಚಳುವಳಿಗಳ ಉದ್ದೇಶ ಈಡೇರಿದೆಯೆ? ಈ ಚಳುವಳಿಗಾರರ ಬಗ್ಗೆ ಇರುವ ದೊಡ್ಡ ಆಪಾದನೆ ಎಂದರೆ ಅವರಿಗೆ ಶ-ಸ ಉಚ್ಚಾರಣೆ ಬರುವುದಿಲ್ಲ ಎನ್ನುವುದು. ಅವರು ನಿಮ್ಮ ವಾದವನ್ನು ತಿಳಿದುಕೊಂಡರೆ ಈ ಚಳುವಳಿಗಳಿಗೆ ಹೊಸದಿಕ್ಕು ಸಿಗುತ್ತದೆ ಎಂದು ನಿಮಗೆ ಅನಿಸುತ್ತದೆಯೇ?

ಚಳುವಳಿಗಳ ವಿಷಯ ಬೇಡ. ಅವನ್ನು ಕುರಿತು ನಾನು ಮಾತಾಡಲು ಬಯಸುವುದಿಲ್ಲ. ಮೇಲಾಗಿ ನಾನು ಹೇಳುವ ವಿಚಾರಗಳು ಚಳುವಳಿಯಿಂದ ಈಡೇರುತ್ತವೆ ಎಂದು ನನಗೆ ಅನಿಸುವುದಿಲ್ಲ.

ಪುಟದ ಮೊದಲಿಗೆ



Votes: 2 Rating: 5
ನಿಮ್ಮಪ್ರತಿಕ್ರಿಯೆ
ತುಳಿಲು ಶಂಕರಬಟ್ಟರೆ, ನಿಮ್ಮ ಹಲಹೊತ್ತಗೆಗಳನ್ನು ಓದಿ ಮೆಚ್ಚಿಕೊಂಡಿದ್ದೀನಿ. ಕನ್ನಡನುಡಿಯ ದಿಟರೂಪಗಳನ್ನು, ನುಣುಪುಗಳನ್ನು ತಿಳಿಸುವಲ್ಲಿ ನಿಮ್ಮ ಹೊತ್ತಗೆಗಳು ತುಂಬಾ ಚನ್ನಾಗಿವೆ. ನೀವು ಹೇಳುವಂತೆ ಕನ್ನಡದ ನಾಲ್ಕು ಲಿಂಗಗಳು, ವಿಬಕ್ತಿಗಳು ಹಾಗು ಉಲಿಕೆ ಹಾಗು ಬರವಣಿಕೆಯ ಬಿರುಕುಗಳು ಗಮನಸೆಳೆಯುವಂತಹದ್ದು. ನಿಮ್ಮ "ಮಾತಿನ ಒಳಗುಟ್ಟು" ಜೆನರಲ್ ನುಡಿಯರಿಮೆಯ ಬಗ್ಗೆ ಸಾಕಶ್ಟು ತಕ್ಕ ಅರಿವನ್ನು ನೀಡುವುದು. ಅದರಲ್ಲಿ ನೀವು ಕೊಡು ಜೇನುನೊಣಗಳ ಮಾತಿನ ಎತ್ತುಗೆ ನನಗೆ ಇಂದಿಗೂ ನೆನೆಪಿದೆ. ಹಾಗೆ ’ಬೇ’ ಎಂಬ ಉಲಿಕೆ ಹೇಗೆ ಬಡಗ ಕನ್ನಡದಲ್ಲಿ ಮೂರು ತಿಳಿವನ್ನು ’ಏ’ದ್ದಿನ ಬೇರೆ ಬೇರೆ ಉಲಿಕೆಯಿಂದ ನಡೆಯುವುದು ಎಂದು ತಿಳಿಯಾಗಿ ಬರೆದಿದ್ದೀರಿ. ನಿಮ್ಮ "ಇಂಗ್ಲಿಶ್ ಪದಗಳಿ ಕನ್ನಡದ್ದೇ ಪದಗಳು" ಪದನೆರಿಕೆ ನನ್ನ ಹತ್ತಿರವಿದೆ. ಅದನ್ನು ಹಿಗ್ಗಿಸಿ ತನ್ನಿ, ಹಲವು ಪದಗಳು ಅದರಲ್ಲಿ ಇಲ್ಲ. ಹಾಗೆ ಈಗಿನ ಕನ್ನಡದಲ್ಲಿರುವ ತೊಡರಾದ ಸಂಸ್ಕ್ರುತ, ಉರ‍್ದು, ಮುಂತಾದ ಹೊರನುಡಿಯ ಪದಗಳಿಗೆ ಸಾಟಿಯಾದ ಕನ್ನಡದ್ದೇ ಪದಗಳು ಪದನೆರಿಕೆ ದೊಡ್ಡ ಬೇಹು ಇದೆ. ಆ ಬಗೆ ಹೊತ್ತಗೆಯೊಂದು ತನ್ನಿರೆಂದು ಕೋರಿ, ನೀವು ತೋಚಿಸುವ ಕನ್ನಡ ಹೊಸ ಬಗೆಯ ಬರವಣಿಗೆಯ ನಾವೆಲ್ಲ ಬಳಸುತ್ತೀವಿ. ನಮಗೆ ಅದು ನಮ್ಮ ಬರವಣಿಗೆಯನ್ನು ಸಲೀಸು ಹಾಗು ಆಡುಮಾತಿಗೆ ಹತ್ತಿರ ತಂದಿದೆ. ನಮ್ಮ ಮಿಂಚಂಚೆಯ ಮಾತುಕತೆಯಲ್ಲ ನಿಮ್ಮ ಬರಹಬಗೆಯಲ್ಲಿ ನಡೆಯುವುದು. ನಿಮ್ಮ ಹೊತ್ತಗೆಗಳು ಹಾಗು ಪದನೆರಿಗೆ ಈ ಮಿಂಬಲೆಯಲ್ಲಿ ಸಿಗುತ್ತಿದೆ. ಅದಕ್ಕಾಗಿ ನಿಮಗೂ ಹಾಗು ಅವನ್ನು ಹೊರತಂದ ಕೂಟಕ್ಕೂ ನಾನು ತಲೆಬಾಗಿ ನನ್ನಿಕೋರುವೆನು. ಹದುಳವಿರಲಿ, ನನ್ನಿ ಮಾಯ್ಸ...
maaisa | 22 Apr 2010 02:34 pm | Reply »
Sri Shankar Bhat has proposed an unique concept to generalise the usage of kannada across the state which may bind the people of karnataka across the present barriers of regionalism. He is not the first to propose such far reaching changes, many stalwarts of Kannada literary world have done so in their own way. It is quite natural for such ideas to get harsh reactions and disapprovals from established sections of society. This happens in all aspects of human life, not only language. But the sad fact is certain unwanted and unsavoury comments from the readers attacking Mr. Bhat. It has become a hi fi fashion of internet journalism, as some one calls it internet democracy, to castigate writers and use such language which donot fit into an intellectual framework. Where is ShankarBhat and Where is Upendra ? Just disgusting. -Divakar n...
Guest | 08 Apr 2010 06:43 pm
ಬರಿ ಓಳು... ಬರಿ ಓಳು... ಈ ಬಟ್ಟರ ಕನ್ನಡ ಅವರಿಗೇ ಇರಲಿ. ನನಗಂತೂ ಉಪೇಂದ್ರನ ಕನ್ನಡವೇ ಇಷ್ಟ. "ಮೈ ಡಿಯರ್ ಹೈ ಕ್ಲಾಸ್ ಎಜುಕೇಟೆಡ್ ನರಸಿಂಹಗಳಿರಾ.. ಸುಮ್ನೆ ಅದು ಇದು ಅಂತ ಟೈಮ್ ವೇಷ್ಟ್ ಮಾಡದ್ ಬಿಟ್ಟು ಜನ್ರುನ್ನಾ ಅವ್ರ್ ಪಾಡಿಗೆ ಇರಕ್ ಬಿಡಿ. ಇಲ್ದಿದ್ರೆ ಇವ್ರ್ಯಾರು ಕನ್ನಡ ಮಾತಾಡಲ್ಲ. ಇವ್ರೆಲ್ಲಾ ನಿಮ್ ಮಾತ್ ಕೇಳಿ ತಲೆ ಕೆಡುಸ್ಕೊಂಡು, ಯದ್ವಾ ತದ್ವಾ ಕನ್ನಡಾನ ಬರ್ಕಂಡು, ಬಾಯಿಗ್ ಬಂದಂಗೆಲ್ಲಾ ಮಾತಾಡಿದ್ರೆ, ಇಡೀ ಕರ್ನಾಟ್ಕಾನೇ ಎಲ್ಲಾ ಅನಿಮಲ್ಸ್, ಅನಿಮಲ್ಸ್ ತರ ಆಗ್ಬಿಟ್ತಾರೆ. ಕನ್ನಡಾ ಓಕೆ, ಆದ್ರೆ ಈ ಭಟ್ರ ಕೊಂಗಾಟಿ ಕನ್ನಡ ಯಾಕೆ? ವಾಟ್ ಡೂ ಯು ಸೇ ಕಾಂತ?"...
Guest | 06 Apr 2010 03:43 pm
sandarshana tumba chennagide. Naalkaidu tingala hinde iidannu odidagale romanchanavagittu. -chandru...
Guest | 06 Apr 2010 09:09 am
ಶಂಕರ ಭಟ್ಟರ (ಸಂಕರ ಬಟ್ಟರ) ಈ ಸಂದರ್ಶನ ಬೆಂಗಳೂರಿನಲ್ಲಿರೋ ಬಹಳಷ್ಟು ಕನ್ನಡಿಗರಿಗೆ ಅರ್ಥ ಆಗೋದೇ ಸಂಶಯ. ಮೊದಲಿಗೆ ಸಂದರ್ಶನ ಅಂದ್ರ ಏನು ಅಂತಾನೇ ಅವ್ರಿಗೆ ಗೊತ್ತಿಲ್ಲ. ”ಏನ್ ಮಗಾ ಇಂಟರ್ವ್ಯೂ ಅಂತ ಹೇಳೋದಲ್ವಾ’ ಅಂತಾರೆ! ಇವರಿಗೆ ಇಂಗ್ಲೀಷ್ ಕನ್ನಡವೇ ಅರ್ಥ ಆಗೋದು. ಅವರಿಗೆ ಉದಾಹರಣೆ ಅಂದ್ರೂ ಗೊತ್ತಾಗಲ್ಲ ಎತ್ತುಗೆ ಅಂದ್ರೂ ಗೊತ್ತಾಗಲ್ಲ example ಅಂದ್ರೆ ಮಾತ್ರ ಗೊತ್ತಾಗೋದು. ಸಂಕರ ಬಟ್ಟರ ಮಾತನ್ನು ಚಾಚೂ ತಪ್ಪದೆ ಪಾಲಿಸುವವರು ಅಂದ್ರೆ ಬೆಂಗಳೂರಿನಲ್ಲಿ ಬ್ಯಾನರ್ ಮತ್ತೆ ಅಂಗಡಿಗಳ ಬೋರ್ಡ್ ಬರೆಯುವವರು. ಅಲ್ಪ ಪ್ರಾಣ ಮಹಾಪ್ರಾಣ ಯಾವ್ದೂ ಬೇಡ ಅವ್ರಿಗೆ. ಯಾರು ಒಪ್ತಾರೋ ಬಿಡ್ತಾರೋ ಗೊತ್ತಿಲ್ಲ. ಶುದ್ಧ ಕನ್ನಡವೂ ಇರಲ್ಲ ಶುದ್ಧ ಸಂಸ್ಕೃವೂ ಇರಲ್ಲ, ಉಳಿಯೋದು ಇಂಗ್ಲೀಶ್ ಕನ್ನಡವಷ್ಟೇ ಇದು ಸಂಕರ ಬಟ್ಟರ ಇಂಗ್ಲೀಶ್ ಕನ್ನಡಲ್ಲಿರೋ ಸಂದರ್ಸನ ನೋಡಿದ್ರೇನೇ ಗೊತ್ತಾಗುತ್ತೆ. -ಸಂದೀಪ್ ಕಾಮತ್...
Guest | 06 Apr 2010 12:05 am
ಸಂಕರ ಬಟ್ಟರೆ, ಕನ್ನಡವನ್ನು ಒಡೆಯುವ ಯತ್ನ ಮಾಡಬೇಡಿ. ಒಳ್ಳೆಯದು ಮಾಡಲು ಸಾಧ್ಯವಾಗದೆ ಹೋದರೆ ಕೆಟ್ಟದ್ದನ್ನು ಮಾತ್ರ ಮಾಡಬೇಡಿ. ಸಾಧ್ಯವಾದಷ್ಟೂ ಕನ್ನಡದಿಂದ ನೀವು ದೂರವುಳಿಯುವುದೇ ಉತ್ತಮ. -- ಸಂಕರ ಸರಮ...
Guest | 05 Apr 2010 08:27 pm
ನಾನು ಗ್ರಾಮೀಣ ಪ್ರದೇಶದ ಶಾಲೆಯಲ್ಲಿ ಓದಿದವಳು. ಕನ್ನಡ ಇಂಗ್ಲಿಷ್ ಎರಡೂ ಓದಲು ಬರೆಯಲು ಕಷ್ಟವಿಲ್ಲ. ನನ್ನ ಪರಿಸರದ ಜನ ನನ್ನ ವಿದ್ಯಾರ್ಥಿಗಳು ಎಲ್ಲರದು ಇದೇ ಅಭಿಪ್ರಾಯ.ಕಳೆದ ಮೂವತ್ತು ವರ್ಷಗಳಿಂದ ಪದವಿ ಹಂತದಲ್ಲಿ ಕನ್ನಡ ಕಲಿಸುವ ನನಗೆ ಶಂಕರಭಟ್ಟರ ವಾದ ವಿಚಿತ್ರವಾಗಿ ಕಾಣುತ್ತಿದೆ. ಅನಗತ್ಯ ಗೊಂದಲ ಹುಟ್ಟಿಸುತಿದ್ದಾರೆ ಅನಿಸುತ್ತಿದೆ. ಓದುಗಳು...
Guest | 04 Apr 2010 10:01 pm
Shankar Bhat's idea's are fantastic - I mean prone to fantasies. When there are so many colloquial forms of kannada, how can we bring kannada close to it ?. This exercise is similar to waht went through in tamilnadu and today proving to be a wasteful exercise, as it neither helped tamil language nor tamil learning. Moreover, he wants to coin new pure kannada words which only he understands as of today. Then why complain that sanskrit words are not understood by many. The fact is that - People learn and use words that they need and it does not really matter weather it has its origins in kannada, or .sanskrit . People will adopt them to their convenience....
Guest | 04 Apr 2010 06:40 am
It is a good and rather a different discussion about Kannada Language. Though I dont agree completely, I respect the motive of Shankar Bhat, I guess he has spent his life time, dedicated, for researching in Kannada. Thats a wonderful thing. But no language is immortal on Earth!! Just from recent statistics, English is the second most spoken language in India now. After few decades, definitely English dominates completely in India. Changes are part of nature. We have to accept and live with it. - Niharika, London...
Guest | 04 Apr 2010 01:37 am
Re: >> from recent statistics, English is the second most spoken language in India Have you seen - http://karnatique.blogspot.com/2010/03/truth-about-english-speakers-in-india.html
Guest | 04 Apr 2010 11:25 am
Re: ಹಿರಿಯರಾದ ಶ್ರೀ ಶಂಕರ ಭಟ್ಟರದ್ದು ಮೊಳೆಜೋಡಿಸಿ ಮುದ್ರಿಸುವ ಕಾಲದ ಚಿಂತನೆ! ಇಂದಿನ ದೈನಿಕಗಳನ್ನು ಒದಲಾರದ ಜನ ಕೆಲವರು ಇರಬಹುದಾದರೂ , ಅರ್ಥೈಸಿಕೊಳ್ಳದ ಪಾಮರರು ಎಲ್ಲಿಯೂ ಇಲ್ಲ. ! ಇಂದು ನಾವು ಪತ್ರೊಕೆಗಳಲ್ಲಿ ಓದುವ ಕನ್ನಡ ಎಲ್ಲಾ ಆರ್ಥಿಕ ವರ್ಗ ಮತ್ತು ಜಾತಿ ಸ್ಥರಗಳಿಗೆ ಸೇರಿದ್ದು. ಕನ್ನಡದಅಕ್ಷರ ಮಾಲೆಗೆ ಕತ್ತರಿ ಹಾಕುವ ಕೆಲಸ ತಮ್ಮಂತಹಾ ಮಹಾ ಬುದ್ಧಿವಂತರಿಗೆ ಯಾಕೆ? ಒಂದು ದಿನ ತಾವು ಕನ್ನಡ ಶಬ್ದಗಳನ್ನೇ ಬಿಟ್ಟು ಇಂಗ್ಲೀಷಿನ ಶಬ್ದಗಳಲ್ಲೇ ಕನ್ನಡ ಲೇಖನ ಬರೆಯುತ್ತೀರಿ. ಕನ್ನಡದ ಸೊಗಡು ಕೆಟ್ಟರೂ ಪರವಾಗಿಲ್ಲ ಕತ್ತರಿ ಬೀಳಲೇ ಬೇಕೆಂದು ಯಾಕೆ ಹೇಳುತ್ತೀರಿ? . ಹಿರಿಯರಾದ ತಮಗೂ ಅಗ್ಗದ ಪ್ರಚಾರದ ಆಸೆಯೇ? ಸಾರ್! ನಮ್ಮ ಕಸ್ತೂರಿ ಕನ್ನಡವನ್ನು ಉಳಿಸಿ. ತಮ್ಮ ಕತ್ತರಿ ಬದಿಗಿಟ್ಟು ನಮ್ಮ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಪಟ್ಟ ಸಿಗುವಂತೆ ಸರ್ವ ಪ್ರಯತ್ನ ಮಾಡಿರಿ.. ಇದು ತಮಗೆ ಶೋಭೆ ತರುತ್ತೆ!
Guest | 04 Apr 2010 12:42 pm
ಹಿರಿಯರಾದ ಶಂಕರ ಭಟ್ಟರೇ , ತಮ್ಮಲ್ಲೊಂದು ನಿವೇದನೆ. ನಾನು ಕನ್ನಡ ಮಾಧ್ಯಮದಲ್ಲಿಯೇ ಓದಿದ್ದು,ಅದೂ ಅಂತ್ಯಂತ ಕುಗ್ರಾಮದಲ್ಲಿ . ಆದರೆ ನೀವು ಹೇಳಿದಂತೆ ನಮಗಾರಿಗೂ ಕನ್ನಡ ಇಷ್ಟೊಂದು ಕಷ್ಟ ಅಂತ ಅನ್ನಿಸಿಯೇ ಇಲ್ಲ . ಅದರಲ್ಲಿ ಕಷ್ಟ ಏನಿದೆ ಭಟ್ಟರೇ? ಸರಿಯಾಗಿ ಉಚ್ಚಾರ ಮಾಡಿ ಎಂದು ಹೇಳುವುದು ತಪ್ಪೆ? ನೀವು ಹೇಳುವ ಹಾಗೆ ಅಶಿಕ್ಷಿತರಿಗೆ ಉಚ್ಚಾರಣೆ ಕಷ್ಟ ಎಂದು ೫೨ ಅಕ್ಷರಗಳನ್ನು ತೆಗೆದು ೩೧ ಹಾಕಿದರೆ ಅವರು ಸಾಕ್ಷರರಾಗುತ್ತರೆಯೇ? ವಿದ್ಯೆ ಕಲಿತವನಿಗೆ ೩೧ ಇದ್ದರೂ ನಡೆಯುತ್ತೆ ೫೨ ಇದ್ದರೂ ಆಗುತ್ತೆ. ಅದರ ಬಗ್ಗೆ ನೀವು ಭಯ ಪಡುವ ಅಗತ್ಯವಿಲ್ಲ. ನಾವು ಸಧ್ಯಕ್ಕೆ ನಮ್ಮ ಇದ್ದ ಕನ್ನಡವನ್ನು ಉಳಿಸಿಕೊಳ್ಳುವತ್ತ ಗಮನಹರಿಸಬೇಕಿದೆ. ನೀವು ಮಾತು ಮಾತಿಗೂ ಮೇಲ್ಜಾತಿ ಕನ್ನಡ ,ಕೀಲ್ಜಾತಿ ಕನ್ನಡ ಎಂದು ಇದ್ದ ಕನ್ನಡವನ್ನು ಗುರುತು ಸಿಗದ ಹಾಗೆ ಒಡೆದು ಹಾಕಬೇಡಿ. ಕೈಲಾದರೆ ಕನ್ನಡ ಭಾಷೆಯನ್ನು ಈಗಿದ್ದ ಹಾಗೆ ಉಳಿಸಿ ಬೆಳೆಸುವತ್ತ ಗಮನ ಹರಿಸಿ. ----ಹನುಮಂತ ಯಂಡಿಗೇರಿ (ಸೌದಿ ಅರೇಬಿಯ )...
Guest | 03 Apr 2010 11:59 pm
Re: ಯಂಡಿಗೇರಿ ಅವರೇ! ಉತ್ತಮ ಪ್ರತಿಕ್ರಿಯೆ ನೀಡಿದ್ದೀರಿ. ತಮಗೆ ಅಭಿನಂದನೆಗಳು.
Guest | 04 Apr 2010 09:06 am
ಸ್ವಾಮೀ ...ಶಂಕರ ಭಟ್ಟರೇ! ಸಂಸ್ಕೃತದ ಮಮೇಲಿನ ಅವಲಂಬನೆಯನ್ನು ಬಿಡಬೇಕೆಂದು ತಾವು ಐರೋಪ್ಯ ಭಾಷೆಯಾದ ಇಂಗ್ಲಿಷ್‍ಗೆ ಶರಣಾಗುತ್ತಾ ಇದ್ದೀರಿ. ತಮ್ಮದು ಅಸಂಬದ್ಧ ತರ್ಕ. ಸಂಸ್ಕೃತ ಇಂದಿನ ಕ್ಲಾಸ್ ವಾರ್ ಹುಟ್ಟು ಹಾಕಿತೆ? ತಮ್ಮ ವ್ಯಾಖ್ಯಾನವನ್ನು ಓದಿ ಓದಿ ನನ್ನ ಸಮಯ ಹಾಳು ಮಾಡಿಕೊಂಡೆ! - ಎಂಬ ವ್ಯಥೆ ಆಗುತ್ತಾ ಇದೆ. ಮಾನ್ಯ ಮೇಟಿ ಮತ್ತು ಸಿರಾಜ್ ಅವರು ತಮ್ಮ ವೃಥಾಲಾಪವನ್ನು ಬಯಲಿಗೆ ಎಳೆದಿದ್ದಾರೆ. ಅವರಿಗೆ ವಂದನೆಗಳು. ತಮ್ಮ ಹಿರಿತನಕ್ಕೆ ನನ್ನ ಗೌರವ ಇದೆ. ಮೂವರಿಗೂ ಪ್ರೀತಿಯ ನಮಸ್ಕಾರಗಳು. - ಇಂತೀ ಆಡು ಭಾಷಿಗನಾದ ದಿಕ್ಕೆಟ್ಟ ಓದುಗ....
Guest | 03 Apr 2010 06:31 pm
Good discussion and interview. I am not sure if I agree with the notion of changing the rules because the mass doesn't follow the them. I'm not trying to be a 'purist' here. In my opinion, the learning and usage of Kannada has nothing to do with the 'standard kannada' that is being used in our news papers or books. In a way, this is not very different from English either. In US, there is a different beteween the english spoken by Whites and Blacks. Regional variations are natural and shouldn't be a justification for moving away from original form. For example: In Mysore area, many people use 'ಯೋಳು' instead of 'ಏಳು'. - NRI...
Guest | 03 Apr 2010 05:51 pm
ಪುಟದ ಮೊದಲಿಗೆ